
ನವದೆಹಲಿ: ಆಗಸ್ಟ್ 2 ರಿಂದ ವಿಂಡೀಸ್‍ನಲ್ಲಿ ನಡೆಯಲಿರುವ ಸರಣಿ ಬಳಿಕ ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರೀ ಹಾಗೂ ಅವರ ತಂಡದ ಗುತ್ತಿಗೆ ಅವಧಿ ಮುಗಿಯಲಿದ್ದು, ಹೊಸ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳ ಹುದ್ದೆಗಳಿಗೆ ಬಿಸಿಸಿಐ ಜುಲೈ 16ರಂದು ಅರ್ಜಿ ಆಹ್ವಾನಿಸಿದೆ.
ಮುಖ್ಯ ತರಬೇತುದಾರನಿಗೆ ಬಿಸಿಸಿಐ ಕೆಲವು ಮಾನದಂಡಗಳನ್ನು ಹಾಕಿದೆ, ಇದರಲ್ಲಿ ಅವರು ಟೆಸ್ಟ್ ಆಡುವ ರಾಷ್ಟ್ರಕ್ಕೆ ಕನಿಷ್ಠ ಎರಡು ವರ್ಷ ಅಥವಾ ಮೂರು ವರ್ಷಗಳ ಕಾಲ ಕೋಚ್ ಆಗಿ ಕೆಲಸ ಮಾಡಿರಬೇಕು ಅಥವಾ ಎ ಟೀಮ್/ಐಪಿಎಲ್ ತಂಡದೊಂದಿಗೆ ಮೂರು ವರ್ಷಗಳ ಕಾಲ ತರಬೇತುದಾರರಾಗಿರಬೇಕು. ಮತ್ತು 30 ಟೆಸ್ಟ್ ಅಥವಾ 50 ಏಕದಿನ ಪಂದ್ಯಗಳನ್ನು ಆಡಿರಬೇಕು.
ಐಸಿಸಿ ವಿಶ್ವಕಪ್ ಗೆಲ್ಲದ ಟೀಂ ಇಂಡಿಯಾಕ್ಕೆ ಹಾಲಿ ಕೋಚ್ ರವಿಶಾಸ್ತ್ರೀ ಅವರೇ ಇರುತ್ತಾರಾ ? ಅಥವಾ ಹೊಸ ಮುಖಗಳಿಗೆ ಮಣೆ ಹಾಕುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಸ್ಪೀನ್ ಲೆಜೆಂಡ್ ಅನಿಲ್ ಕುಂಬ್ಳೆ ಅವರನ್ನು ಮತ್ತೆ ಪರಿಗಣಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕುಂಬ್ಳೆ ಕೋಚ್ ಆಗಿದ್ದ ಅವಧಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿತ್ತು.
ಅದರಲ್ಲೂ ಒಂದು ಬಾರಿ ಐಪಿಎಲ್ ವಿಜೇತ ತಂಡ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಕೋಚ್ ಟಾಮ್ ಮೂಡಿ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಆಸ್ಟ್ರೇಲಿಯಾ ಪರ 8 ಟೆಸ್ಟ್ ಹಾಗೂ 76 ಏಕದಿನ ಪಂದ್ಯಗಳನ್ನಾಡಿರುವ ಮೂಡಿ ಉತ್ತಮ ಕೋಚ್ ಆಗಿದ್ದಾರೆ. ಒಟ್ಟಾರೇ ಈ ಪೈಕಿ ಯಾರು ಮುಂದಿನ ಟೀಂ ಇಂಡಿಯಾ ಮುಖ್ಯ ಕೋಚ್ ಆಗಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.














