
ಸುಬ್ರಹ್ಮಣ್ಯ : ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಮಂಗಳೂರು – ಬೆಂಗಳೂರು ನಡುವಿನ ರೈಲು ಓಡಾಟವನ್ನು ಜುಲೈ 20 ಮತ್ತು 21 ರಂದು ಸ್ಥಗಿತಗೊಳಿಸಲಾಗಿದೆ. ಶಿರಾಡಿ ಘಾಟ್ ರೈಲು ಮಾರ್ಗದ ಸಿರಿಬಾಗಿಲು ಸಮೀಪದ ಮಣಿಭಂಡ ಬಳಿ ರೈಲು ಹಳಿಗಳ ಬಳಿ ಇರುವ ಅಪಾಯಕಾರಿ ಬಂಡೆಯನ್ನು ತೆರವುಗೊಳಿಸುವ ಸಲುವಾಗಿ ಎರಡು ದಿನ ರೈಲು ಸಂಚಾರ ಸ್ಥಗಿತಗೊಳಿಸಲು ಇಲಾಖೆ ನಿರ್ಧರಿಸಿದೆ.
ಘಾಟಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ಅಪಾಯಕಾರಿ ಬಂಡೆ ಯಾವುದೇ ಕ್ಷಣದಲ್ಲಿ ರೈಲು ಹಳಿಯ ಮೇಲೆ ಉರುಳುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಯಾವುದೇ ಅಪಾಯ ಸಂಭವಿಸುವ ಮುನ್ನ ರೈಲ್ವೇ ಇಲಾಖೆ ಎಚ್ಚೆತ್ತುಕೊಂಡಿದೆ. ಈಗಾಗಲೇ ಬಂಡೆ ತೆರವಿಗೆ ಸಿದ್ಧತೆ ನಡೆಸಿದೆ. ಕಳೆದ ವರ್ಷ ಮಳೆಗಾಲದ ಸಮಯದಲ್ಲಿ ಸುಬ್ರಹ್ಮಣ್ಯ – ಸಿರಿಬಾಗಿಲು ನಡುವಿನ ಕಿ.ಮೀ 86ರ ಹಳಿಯ ಮೇಲೆ ಭೂ ಕುಸಿತ ಸಂಭವಿಸಿ 110 ಮೀ ದೂರ, 25 ಮೀ. ಎತ್ತರಕ್ಕೆ ಮಣ್ಣು ಬಿದ್ದು, ಸುರಂಗದ ಪ್ರವೇಶ ದ್ವಾರ ಮಣ್ಣು ಮುಚ್ಚಿ ಸಂಚಾರ ಸ್ಥಗಿತಗೊಂಡಿತ್ತು.















