
ಬೆಂಗಳೂರು : ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಮತ್ತು ಆಸ್ಪತ್ರೆಗಳಿಗಾಗಿ ಕಾರ್ಯನಿರ್ವಾಹಕರನ್ನು ನೇಮಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

2018 ನ.30 ರಂದು ಜಾರಿಗೆ ಬಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ 291 ಸಾಮಾನ್ಯ, 254 ಕ್ಲಿಷ್ಟಕರ ದ್ವಿತೀಯ, 900 ತೃತೀಯ ಹಾಗೂ 169 ಇತರ ಆರೋಗ್ಯ ಸಮಸ್ಯೆಗಳಿಗೆ ತುರ್ತು ಚಿಕಿತ್ಸೆ ಒದಗಿಸಲಾಗುತ್ತಿದೆ. ಈ ಚಿಕಿತ್ಸೆಯ ಮೊತ್ತವನ್ನು ಸುವರ್ಣ ಆರೋಗ್ಯ ಟ್ರಸ್ಟ್ ಮೂಲಕ ಪಡೆಯಲು ರೋಗಿಯ ಮಾಹಿತಿ ಹಾಗೂ ಚಿಕಿತ್ಸಾ ವಿವರಗಳನ್ನು ಟ್ರಸ್ಟ್ ಪೋರ್ಟ್‍ಲ್ ನಲ್ಲಿ ದಾಖಲಿಸಲು ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಕರ್ನಾಟಕ ಪಾರದರ್ಶಕ ಕಾಯಿದೆ ಅನ್ವಯ ಹೊರಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಏಜೆನ್ಸಿಯಿಂದ ನಿರ್ದಿಷ್ಟ ವಿದ್ಯಾರ್ಹತೆ ಬಿ.ಕಾಂ ಅಥವಾ ಬಿಬಿಎ, ಐ.ಟಿ, ಎಂಬಿಎ, ಪಿಜಿಡಿಬಿಎ ವಿದ್ಯಾರ್ಥಹತೆ ಹೊಂದಿರುವ ಕಾರ್ಯನಿರ್ವಾಹಕರನ್ನು ಪಡೆಯಲು ಸೂಚಿಸಲಾಗಿದೆ. ಇದಕ್ಕಾಗಿ ಟೆಂಡರ್ ಕರೆದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷತೆಯ ಸಮಿತಿ ರಚಿಸಿ ಆಸ್ಪತ್ರೆಗಳಿಗೆ ಅರ್ಹರನ್ನು ನೇಮಕ ಮಾಡಬೇಕು ಎಂದು ಸೂಚಿಸಲಾಗಿದೆ.















