
ಕಲ್ಲಡ್ಕ: ‘ಮಾತೃದೇವೋಭವ, ಪಿತೃದೇವೋಭವ, ಗುರುರ್ದೇವೊಭವ, ಅತಿಥಿ ದೇವೋಭವ’ ಎಂಬ ಶ್ಲೋಕ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾದ ವಿಷಯ. ಹಿರಿಯರ ಆಶಿರ್ವಾದವಿಲ್ಲದೆ ಜೀವನದಲ್ಲಿ ಅಭಿವೃದ್ಧಿ ಹೊಂದಲು ಅಸಾಧ್ಯ. ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳದಿದ್ದರೆ ಜೀವನ ಅವ್ಯವಸ್ಥೆ, ಅಶಿಸ್ತಿನಿಂದ ಕೂಡಿರುತ್ತದೆ. ಇದು ಜೀವನಕ್ಕೆ, ದೇಶಕ್ಕೆ ಮಾರಕ ಎಂದು ಹೇಳಿದರೆ ತಪ್ಪಾಗಲಾರದು. ಆದ್ದರಿಂದ ಶಿಸ್ತು, ಸಂಸ್ಕಾರವನ್ನು ಶಿಕ್ಷಣದ ಜೊತೆಗೆ ನೀಡುತ್ತಿರುವ ಶಾಲೆ ಶ್ರೀರಾಮ ಎಂದು ಕರ್ನಾಟಕ ಪ್ರೌಢ ಶಾಲೆ ಮಾಣಿ ಇಲ್ಲಿನ ನಿವೃತ್ತ ದೈಹಿಕ ಶಿಕ್ಷಕರಾದ ಗಂಗಾಧರ ರೈಯವರು ಶ್ರೀರಾಮ ಪ್ರೌಢಶಾಲಾ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನಾ ಸ್ವೀಕರಿಸಿ ಮಾತನಾಡಿದರು.
ವಿಶ್ವ ಗುರು ಭಾರತ ಗುರು ಪರಂಪರೆಗೆ ಸ್ಪೂರ್ತಿ. ತನ್ನ ತಪ್ಪನ್ನು ತಿದ್ದುವ ಸಾಮಾನ್ಯ ವ್ಯಕ್ತಿಯಿಂದ ಹಿಡಿದು, ಪರಿಸರದ ಪ್ರಾಣಿ ಪಕ್ಷಿಗಳು ಹಾಗೂ ಎಲ್ಲಾ ಸಂಗತಿಗಳು ಗುರುವಿಗೆ ಸಮಾನ. ಕಾಗೆ ಒಗ್ಗಟ್ಟಿಗೆ, ನಾಯಿ ನಿಯತ್ತಿಗೆ, ಮರ ಪರೋಪಕಾರಕ್ಕೆ ಉದಾಹರಣೆ. ಇವೆಲ್ಲಾ ನಮಗೆ ನೈತಿಕ ಬದುಕನ್ನು ಕಲಿಸುವ ಗುರು. ಆದ್ದರಿಂದ ಪ್ರಾಣಿಗಳಿಗೆ ಗುರುವಿನ ಅವಶ್ಯಕತೆಯಿಲ್ಲ. ಆದರೆ ಮನುಕುಲವನ್ನು ತಿದ್ದಿ ತೀಡಿ ಸತ್ಪ್ರಜೆಯನ್ನಾಗಿ ಮಾಡಲು ಉತ್ತಮ ಗುರುವಿನ ಅವಶ್ಯಕತೆ ಇದೆ. ಆದ್ದರಿಂದ ಗುರುವಿಗೆ ಕತ್ತಲೆ ಕವಿದ ಮನಸ್ಸನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಮಹತ್ತರವಾದ ಜವಾಬ್ದಾರಿಯಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್‍ರವರು ವಿದ್ಯಾರ್ಥಿಗಳಿಗೆ ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್ ಎನ್, ಪ್ರೌಢಶಾಲಾ ಮುಖ್ಯಶಿಕ್ಷಕಿ ವಸಂತಿಕುಮಾರಿ, ಶ್ರೀರಾಮ ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.















