
ಮಡಿಕೇರಿ: ರಾಜಕಾರಣದಲ್ಲಾದ ಭಾರೀ ಬದಲಾವಣೆಯಿಂದಾಗಿ ಜೆಡಿಎಸ್ ತನ್ನ ಉಳಿದ ಶಾಸಕರನ್ನು ಉಳಿಸಿಕೊಳ್ಳಲು ಇಂದು ಸಂಜೆ 5ರ ವೇಳೆಗೆ ಮಡಿಕೇರಿ ರೆಸಾರ್ಟ್‍ಗೆ ಶಿಫ್ಟ್ ಮಾಡಲು ಮುಂದಾಗಿದೆ. ಶಾಸಕರೊಂದಿಗೆ ಸಿಎಂ ಕುಮಾರಸ್ವಾಮಿ ಸಭೆ ನಡೆಸಲಿದ್ದು, ಸಭೆ ಬಳಿಕ ಮಡಿಕೇರಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ವಿಶೇಷ ಬಸ್ ಮೂಲಕ ಉಳಿದ ಶಾಸಕರನ್ನು ಮಡಿಕೇರಿಗೆ ಕರೆದೊಯ್ಯಲಾಗುತ್ತದೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಪ್ಯಾಡಿಂಗ್ ಟನ್ ರೆಸಾರ್ಟಿನಲ್ಲಿ ರೂಮುಗಳು ಬುಕ್ಕಿಂಗ್ ಆಗಿವೆ. ಅಷ್ಟೇ ಅಲ್ಲದೇ ಮೂರು ರಾತ್ರಿ ಉಳಿದುಕೊಳ್ಳಲು ಪ್ಲಾನ್ ಮಾಡಿ ರೂಮುಗಳನ್ನು ಬುಕ್ ಮಾಡಲಾಗಿದೆ. 35 ರೂಂಗಳಲ್ಲಿ 10 ವಿಲ್ಲಾ, 15 ಡಿಲೆಕ್ಸ್ ಮತ್ತು 10 ಕಾಟೇಜ್ ರೂಂಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಪ್ಯಾಡಿಂಗ್ ಟನ್ ಹೋಟೆಲ್ ಮ್ಯಾನೇಜರ್ ರಶ್ಮಿ, ರೂಂಗಳ ಬುಕ್ಕಿಂಗ್ ಬಗ್ಗೆ ದೃಢಪಡಿಸಿದ್ದಾರೆ. ರಾತ್ರಿ 1 ಗಂಟೆಗೆ ರೆಸಾರ್ಟ್ ಎಂಡಿ ಕಡೆಯಿಂದ ರೂಂಗಳು ಬುಕ್ ಆಗಿವೆ ಎಂದು ತಿಳಿದು ಬಂದಿದೆ. ಇತ್ತ ಮಡಿಕೇರಿಯ ರೆಸಾರ್ಟ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.














