
ಪುತ್ತೂರು: ವಿದ್ಯಾರ್ಥಿಗಳು ಪಠ್ಯಾಧ್ಯಯನದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಭವಿಷ್ಯ ರೂಪಿಸಿಕೊಳ್ಳುವ ಮಹತ್ವದ ಜವಾಬ್ದಾರಿಯನ್ನು ಹೊಂದಿರಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.

ಅವರು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಜುಲೈ 3 ರಂದು ಆಯೋಜಿಸಲಾದ ಬಿಬಿಎ ವಿಭಾಗದ ಫ್ರೆಶರ್ಸ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿವಿಧ ಚಟುವಟಿಕೆಗಳಲ್ಲಿ ಸಹಭಾಗಿಯಾದಾಗ ಬಾಂಧವ್ಯ, ಒಗ್ಗಟ್ಟು ಬಲಗೊಳ್ಳುತ್ತದೆ. ಶಿಕ್ಷಣದ ಹಲವು ಮಜಲುಗಳು ಸಮಗ್ರ ಜ್ಞಾನಾಭಿವೃದ್ಧಿಗೆ ಸಹಕರಿಸುತ್ತದೆ. ಅದಕ್ಕಾಗಿಯೇ ಕಾಲೇಜು ನಾನಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳು ತಮ್ಮನ್ನ ತಾವು ತೊಡಗಿಸಿಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ವಿಭಾಗ ಮುಖ್ಯಸ್ಥ ರಾಧಾಕೃಷ್ಣ ಗೌಡ, ಮ್ಯಾನೇಜ್‍ಮೆಂಟ್ ಅಸೋಸಿಯೇಶನ್ ಸಂಯೋಜಕ ಪ್ರಶಾಂತ್ ರೈ ಉಪಸ್ಥಿತರಿದ್ದರು. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪುಷ್ಪಾ ಎನ್, ಅಭಿಷೇಕ್ ಸುವರ್ಣ, ಹರ್ಷಿತ್ ಆರ್ ಸಹಕರಿಸಿದರು. ಮ್ಯಾನೇಜ್‍ಮೆಂಟ್ ಅಸೋಸಿಯೇಶನ್ ಅಧ್ಯಕ್ಷೆ ತೃತೀಯ ಬಿಬಿಎ ವಿದ್ಯಾರ್ಥಿನಿ ಫಾತಿಮತ್ ಫೈಜ್ಹಾ ಸ್ವಾಗತಿಸಿ, ತೃತೀಯ ಬಿಬಿಎ ವಿದ್ಯಾರ್ಥಿನಿ ಅನುರಾಧಾ ಭಾರಧ್ವಾಜ್ ವಂದಿಸಿ, ಮೈತ್ರಿ ನಿರೂಪಿಸಿದರು.














