
ಹರ್ದೋಯಿ, ಉತ್ತರ ಪ್ರದೇಶ : ಟ್ರ್ಯಾಕ್ಟರ್ ಟ್ರಾಲಿಗೆ ಟ್ರಕ್ ಢಿಕ್ಕಿಯಾದ ಭೀಕರ ಅವಘಡದಲ್ಲಿ ಆರು ಮಂದಿ ಮೃತಪಟ್ಟು ಇತರ 30 ಮಂದಿ ಗಾಯಗೊಂಡ ಘಟನೆ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಿಂದ ವರದಿಯಾಗಿದೆ.
ಜಿಲ್ಲೆಯ ಸದರ್‌ಪುರದಲ್ಲಿ ನಿನ್ನೆ ಬುಧವಾರ ತಡ ರಾತ್ರಿ ಈ ಅವಘಡ ನಡೆದಿದೆ. ಟ್ರ್ಯಾಕ್ಟರ್ ಟ್ರಾಲಿಯಲ್ಲಿ 42 ಮಂದಿ ಇದ್ದರು. ಇವರು ಕಾರ್ಯಕ್ರಮವೊಂದನ್ನು ಮುಗಿಸಿ ಊರಿಗೆ ಮರಳುತ್ತಿದ್ದರು.
ಅವಘಡದ ಭೀಕರತೆಯಲ್ಲಿ ಟ್ರ್ಯಾಕ್ಟರ್ ಟ್ರಾಲಿ ಅಡಿ ಮೇಲಾಗಿ ಗಟಾರಕ್ಕೆ ಉರುಳಿ ಬಿತ್ತು. ಮೃತರನ್ನು ವಿಶ್ರಾಮ್ 60, ಗಂಗಾರಾಮ್ 50, ಶಂಕರ್ 55, ಬಾಲಕ್ ರಾಮ್ 60, ರಿಷಿ ಕುಮಾರ್ 30 ಮತ್ತು ರಾಜಾರಾಂ 35 ಎಂದು ಗುರುತಿಸಲಾಗಿದೆ.
ಗಾಯಗೊಂಡ 16 ಮಂದಿಯನ್ನು ಹರ್ದೋಯಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಉಳಿದವರಿಗೆ ಬಿಲ್‌ಗಾಮ್ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಸರ್ಕಲ್ ಆಫೀಸರ್ ವಿಜಯ್ ಸಿಂಗ್ ರಾಣಾ ತಿಳಿಸಿದ್ದಾರೆ.















