
ಬೆಂಗಳೂರು: ಪಕ್ಷದಲ್ಲಿ ತಮ್ಮ ಮಾತಿಗೆ ಬೆಲೆ ಇಲ್ಲ ಎಂದು ಬೇಸರ ಹೊರಹಾಕಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮಂಗಳವಾರ ದಿಢೀರ್ ಸುದ್ದಿಗೋಷ್ಠಿ ಕರೆದಿದ್ದಾರೆ. ಎಚ್.ವಿಶ್ವನಾಥ್ ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಸುದ್ದಿಗೋಷ್ಠಿ ಕುತೂಹಲ ಮೂಡಿಸಿದೆ.
ನಂತರ ನಿಖಿಲ್ ಕುಮಾರಸ್ವಾಮಿ ಅವರನ್ನು ವಿಶ್ವನಾಥ್ ಭೇಟಿ ಮಾಡಿ ಚರ್ಚಿಸಿದರು. ನಿಖಿಲ್‌ಗೆ ಪಕ್ಷ ಸಂಘಟನೆ ಹೊಣೆಗಾರಿಕೆ ನೀಡಲಾಗುವುದು. ಜೆಡಿಎಸ್ ಯುವ ಘಟಕದ ಜವಾಬ್ದಾರಿ ಬೇರೆಯವರಿಗೆ ಕೊಡಿ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ. ಹೀಗಾಗಿ, ಆ ಸ್ಥಾನಕ್ಕೆ ನಿಖಿಲ್ ಅವರನ್ನು ನೇಮಿಸಲಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್, ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಭೇಟಿಯಲ್ಲಿ ವಿಶೇಷ ಏನೂ ಇಲ್ಲ. ಸುದ್ದಿಗೋಷ್ಠಿ ಕರೆದಿದ್ದೇನೆ. ಅಲ್ಲಿ ಎಲ್ಲ ವಿಚಾರಗಳ ಬಗ್ಗೆ ಮಾತನಾಡುತ್ತೇನೆ. ಒಂದು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ, ಪ್ರಭುತ್ವ, ಸಮನ್ವಯತೆ ಎಲ್ಲದರ ಬಗ್ಗೆ ಮಾತನಾಡಲಿದ್ದೇನೆ ಎಂದು ಹೇಳಿದರು.









