
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಕಾಶಮಾನವಾಗಿ ಗೆಲುವು ಸಾಧಿಸಿರುವ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮುಂದಿನ ತಿಂಗಳು ಮಾಲ್ಡೀವ್ಸ್ ದೇಶಕ್ಕೆ ಭೇಟಿ ನೀಡಲಿದ್ದಾರೆ. ಇದು ಎರಡನೇ ಅವಧಿಗೆ ಪ್ರಧಾನಿಯಾಗುವ ಮೋದಿಯವರ ಮೊದಲ ವಿದೇಶ ಪ್ರವಾಸ ಆಗಲಿದೆ. ಭೇಟಿಮಾಡಿದ ವೇಳೆ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿ ಜೊತೆ ಪ್ರಧಾನಿ ಮೋದಿ ದ್ವೀಪಕ್ಷಿಯ ಚರ್ಚೆ ನಡೆಸಲಿದ್ದಾರೆ. ಜೂನ್ 7-8 ರಂದು ಮಾಲ್ಡೀವ್ಸ್ ರಾಜಧಾನಿ ಮೇಲ್‍ಗೆ ಭೇಟಿ ಕೊಡಲಿರುವ ಮೋದಿ ಅಲ್ಲಿನ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಇಬ್ರಾಹಿಂ ಮೊಹಮ್ಮದ್ ಸೋಲಿ ಮಾಲ್ಡೀವ್ಸ್ ನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಮೋದಿ ಭಾಗವಹಿಸಿದ್ದರು. ಇದು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿದೆ. ಅದಲ್ಲದೇ ಭಾರತದ ಈ ಭೇಟಿ ಚೀನಾಕ್ಕೆ ನುಂಗಲಾರದ ತುತ್ತಾಗಿ ಕಷ್ಟಕರವಾದ ಸಂದರ್ಭವನ್ನು ಉಂಟುಮಾಡಿತ್ತು. ನಂತರ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಉತ್ತಮಗೊಳಿಸಲು ಮಾರ್ಚ್‍ನಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾಲ್ಡೀವ್ಸ್ ಗೆ ಭೇಟಿ ನೀಡಿ, ಮಹತ್ವದ ಚರ್ಚೆ ಕೈಗೊಂಡಿದ್ದರು.















