
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಕರ್ನಾಟಕ – ತಮಿಳುನಾಡು ಗಡಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಕಂಡು ಬಂದಿದ್ದ ಮಳೆಯ ಆರ್ಭಟ ಗುಡುಗು ಸಹಿತ ಗಾಳಿ ಮಳೆಯನ್ನು ಇನ್ನು 3 ದಿನಗಳ ಎದುರಿಸಬೇಕಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರು, ದಕ್ಷಿಣ ಒಳನಾಡು, ಬೆಂಗಳೂರಿನಲ್ಲಿ ಭಾನುವಾರದಂದು ಮೇಖ್ರಿ ಸರ್ಕಲ್, ಅರಮನೆ, ಮೆಜೆಸ್ಟಿಕ್, ಜಯನಗರ, ವಿಜಯನಗರ, ಸಂಪಿಗೆ ರಸ್ತೆ, ಜಯಮಹಲ್, ಕೇಂಗೇರಿ, ವೈಯಾಲಿಕಾವಲ್, ಜಯನಗರ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿದಿದೆ. ಸುಮಾರು 40ಕ್ಕೂ ಅಧಿಕ ಮರಗಳು ಧರೆಗುರುಳಿವೆ, 34ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಗಂಟೆಗೆ 25 ರಿಂದ 30 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ. ಮೆಜೆಸ್ಟಿಕ್, ಸಿಲ್ಕ್ ಬೋರ್ಡ್, ಅರಮನೆ ಮೈದಾನ ಸೇರಿದಂತೆ ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಇದಲ್ಲದೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆಗಳಲ್ಲಿ ಕೂಡಾ ಬಿರುಸಿನ ಗಾಳಿ ಮಳೆ ಬಿದ್ದಿದೆ. ಭಾರಿ ಮಳೆಗೆ ಸಿಲುಕಿ ತತ್ತರಿಸಿದವರಿಗೆ ನೆರವಾಗಿ, ಅಗತ್ಯ ಬಿದ್ದರೆ ನನ್ನನ್ನು ಸಂಪರ್ಕಿಸಿ ಎಂದು ಸಂಸದ ಡಿ.ವಿ ಸದಾನಂದ ಗೌಡ ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ಮುಖ್ಯಮಂತ್ರಿಗಳ ಕಚೇರಿಯಿಂದಲೂ ಗಾಳಿ ಮಳೆ ಕುರಿತಂತೆ ಟ್ವೀಟ್ ಮಾಡಲಾಗಿತ್ತು.

ಬೆಂಗಳೂರಿನಾದ್ಯಂತ ಬಾರೀ ಮಳೆ ಸುರಿಯುತ್ತಿದ್ದು ಎಲ್ಲ ಬಿಬಿಎಂಪಿ ಸದಸ್ಯರು ತಮ್ಮ ತಮ್ಮ ವಾರ್ಡಗಳಲ್ಲಿ ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿರಿ . ಇದು ನಮ್ಮ ನಿಮ್ಮೆಲ್ಲರ ಕರ್ತವ್ಯ ಕೂಡಾ. ಅಗತ್ಯ ಬಿದ್ದರೆ ನನ್ನನ್ನು ಸಹ ಸಂಪರ್ಕಿಸಿ ಎಂದು ಟ್ವೀಟ್ ಮಾಡಿದ ಸಂಸದ ಡಿವಿ ಸದಾನಂದ ಗೌಡ.

ಬಿಬಿಎಂಪಿ ಮೇಯರ್, ಬಿಬಿಎಂಪಿ ಆಯುಕ್ತರು, ಬೆಸ್ಕಾಂ, ಬಿಡಬ್ಲ್ಯೂ ಎಸ್ಎಸ್ ಬಿ ಟ್ವೀಟ್ ಖಾತೆಗಳಿಗೆ ಟ್ಯಾಗ್ ಮಾಡಿ ಕೂಡಲೇ ಕಾರ್ಯತತ್ಪರರಾಗಿರಿ ಎಂದ ಡಿವಿ ಸದಾನಂದ ಗೌಡ ಅವರು ನಂತರ ಸಿಎಂ ಕಚೇರಿಯ ಟ್ವೀಟ್ ಮರು ಟ್ವೀಟ್ ಮಾಡಿ ಬಿಬಿಎಂಪಿಯ 24 ಗಂಟೆಗಳ ಸಹಾಯವಾಣಿಯ ಸಂಖ್ಯೆಯನ್ನು ಹಾಕಿರಿ ಎಂದಿದ್ದಾರೆ. ಬಿಬಿಎಂಪಿ ಕಾಲ್ ಸೆಂಟರ್ : 080-22660000

ಮುಖ್ಯಮಂತ್ರಿ ಕಚೇರಿಯ ಟ್ವೀಟ್ ಹಾಗೂ ಸದಾನಂದ ಗೌಡ ಅವರ ಮಳೆ ಕುರಿತ ಟ್ವೀಟ್ ಗೆ ಪ್ರತಿಕ್ರಿಯಿಸಿದ ನಾಗರಿಕರು ತಮ್ಮಮ್ಮ ಪ್ರದೇಶದಲ್ಲಿ ಉಂಟಾದ ಹಾನಿ, ತೊಂದರೆ ಬಗ್ಗೆ ಟ್ವೀಟ್ ಮಾಡಿದ್ದಾರೆ.















