
ಹಿಂದಿನ ಕಾಲದಲ್ಲಿ ಮನೆ ಮುಂದೆ ಸಗಣಿಯಿಂದ ಸಾರಿಸಿ ರಂಗೋಲಿ ಇಡ್ತಿದ್ರು. ಅಲ್ಲದೆ ಮನೆಯೊಳಗೂ ನೆಲಕ್ಕೆ ಅಥವಾ ಸೌದೆ ಒಲೆಯ ಸುತ್ತ ಸಗಣಿ ಬಳಿಯೋ ಪದ್ಧತಿ ಇತ್ತು. ಇದರಿಂದ ಬೇಸಿಗೆಯಲ್ಲಿ ಮನೆ ತಣ್ಣಗಿರುತ್ತೆ, ಚಳಿಗಾಲದಲ್ಲಿ ಬೆಚ್ಚಗಿರುತ್ತೆ ಅನ್ನೋ ನಂಬಿಕೆ ಇದೆ. ಆದ್ರೆ ಇತ್ತೀಚಿಗೆ ಪುತ್ತೂರು ಸಮೀಪದ ಬೆಟ್ಟಂಪಾಡಿಯಲ್ಲಿ ಮನೆಗೆ ಸೆಗಣಿಯಿಂದ ಪೆಯಿಂಟ್ ಹಾಕಿ ಸುದ್ದಿಯಾಗಿತ್ತು.

ಇದೀಗ ಗುಜರಾತಿನ ಮಹಿಳೆಯೊಬ್ಬರು ತನ್ನ ಕಾರ್ ಮೇಲೆ ಬೇಕಂತಲೇ ಸಗಣಿ ಲೇಪನ ಮಾಡಿ, ಪೇಂಟ್ ಕೂಡ ಮಾಡಿದ್ದಾರೆ. ಹೌದು. ಗುಜರಾತ್‍ನ ಅಹಮದಾಬಾದ್ ನಿವಾಸಿಯಾದ ಸೆಜಲ್ ಶಾಹ್ ಅನ್ನೋರು ತನ್ನ ಟೊಯೋಟೋ ಆಲ್ಟಿಸ್ ಕಾರ್ ಮೇಲೆ ಸಗಣಿ ಲೇಪಿಸಿದ್ದಾರೆ. ಜೊತೆಗೆ ಅದರ ಮೇಲೆ ಬಿಳಿ ಪೇಂಟ್‍ನಿಂದ ಹೂವಿನ ಚಿತ್ತಾರ ಬಿಡಿಸಿದ್ದಾರೆ. ರಸ್ತೆಯಲ್ಲಿ ಇವರ ಕಾರ್ ಹೋಗ್ತಿದ್ರೆ ತಿರುಗಿ ನೋಡದವರೇ ಇಲ್ಲ. ಕೇವಲ ಇವರ ಏರಿಯಾ ಮಾತ್ರವಲ್ಲ, ಸೇಜಲ್ ಅವರ ಕಾರ್ ಈಗ ಇಂಟರ್ನೆಟ್ ತುಂಬ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇವರ ಕಾರ್ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸಗಣಿ ಬಳಿಯೋದ್ರಿಂದ ಬೇಸಿಗೆಯಲ್ಲಿ ಏರ್ ಕಂಡೀಷನ್ ಇಲ್ಲದಿದ್ರೂ ಕಾರ್ ಕೂಲ್ ಆಗಿರುತ್ತೆ , ಹಾಗೇ ಚಳಿಗಾಲದಲ್ಲಿ ಬೆಚ್ಚಗಿರುತ್ತೆ ಅಂತ ಸೇಜಲ್ ಹೇಳ್ತಾರೆ. ಅಲ್ಲದೆ ಈ ರೀತಿ ಮಾಡುವುದರ ಹಿಂದೆ ಪರಿಸರ ಸಂರಕ್ಷಣೆಯ ಉದ್ದೇಶ ಕೂಡ ಇದೆ ಎಂದಿದ್ದಾರೆ. ಇದು ನನ್ನ ಕಾರನ್ನ ಕೂಲ್ ಆಗಿ ಇಡೋದಷ್ಟೇ ಅಲ್ಲ, ಮಾಲಿನ್ಯ ತಡೆಗಟ್ಟಲು ಕೂಡ ಸಹಾಯ ಮಾಡುತ್ತೆ. ನಾವು ಕಾರ್ ನಲ್ಲಿ ಎಸಿ ಬಳಸಿದಾಗ ಹೊರಸೂಸುವ ಹಾನಿಕಾರಕ ಗ್ಯಾಸ್‍ನಿಂದ ತಾಪಮಾನ ಹೆಚ್ಚಾಗಿ, ಜಾಗತಿಕ ತಾಪಮಾನ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತೆ. ಸಗಣಿಯಿಂದ ನನ್ನ ಕಾರ್ ಕೂಲ್ ಆಗಿರೋದ್ರಿಂದ ನಾನು ಎಸಿ ಆಫ್ ಮಾಡಿ ಕಾರ್ ಚಾಲನೆ ಮಾಡ್ತೀನಿ ಎಂದಿದ್ದಾರೆ.
ನಮ್ಮ ಮನೆಯಲ್ಲಿ ನೆಲ ಹಾಗೂ ಗೋಡೆಗೆ ಸಗಣಿ ಬಳಿಯುತ್ತಿದ್ದುದರಿಂದಲೇ ನನಗೆ ಈ ಐಡಿಯಾ ಬಂದಿದೆ. ಅದರಿಂದ ಮನೆ ಕೂಲ್ ಆಗಿರುತ್ತೆ. ಹೀಗಾಗಿ ಕಾರ್ ಮೇಲೂ ಸಗಣಿ ಬಳಿಯಲು ನಿರ್ಧರಿಸಿದೆ ಎಂದಿದ್ದಾರೆ.









