
ಸದ್ಯ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಕೂಡ ಒಬ್ಬರು. ಪರಿಪೂರ್ಣ ಸಂಗೀತ ನಿರ್ದೇಶಕ ಆಗುವ ಮೊದಲು ಹಲವಾರು ಚಿತ್ರಗಳಿಗೆ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು ರವಿ. ಅದಾದ ಮೇಲೆ ರವಿಗೆ ಹೆಸರು ತಂದುಕೊಟ್ಟಿದ್ದು, ಪ್ರಶಾಂತ್ ನೀಲ್ ನಿರ್ದೇಶನದ ಚೊಚ್ಚಲ ಚಿತ್ರ ‘ಉಗ್ರಂ’

ಉಗ್ರಂ ಬಳಿಕ ಮಫ್ತಿ, ಅಂಜನಿಪುತ್ರ, ಕೆಜಿಎಫ್ ಚಿತ್ರದ ಹಾಡುಗಳು ಸೂಪರ್ ಹಿಟ್ ಆದವು. ಈ ನಡುವೆ ರವಿ ತನ್ನ ಮಾತೃ ಭಾಷೆ ಕುಂದಾಪುರ ಕನ್ನಡದಲ್ಲಿ ‘ಗರಗರ್ ಮಂಡ್ಲ’ ಎಂಬ ಚಿತ್ರವನ್ನು ನಿರ್ದೇಶಿಸುವುದರ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟರು. ನಂತರ ಕನ್ನಡದಲ್ಲಿ ‘ಕಟಕ’ ಎಂಬ ಹಾರರ್ ಚಿತ್ರವನ್ನು ನಿರ್ದೇಶಿಸಿ ಭರವಸೆಯ ನಿರ್ದೇಶಕ ಎನಿಸಿಕೊಂಡ್ರು. ಕಟಕ ಚಿತ್ರದ ಟ್ರೈಲರನ್ನು ಬರೋಬ್ಬರಿ 13 ಭಾಷೆಗಳಲ್ಲಿ ಬಿಡುಗಡೆಗೊಳಿಸಿದ್ದು ರವಿ ಬಸ್ರೂರು ಪ್ರಯೋಗಶೀಲತೆಯನ್ನು ಎತ್ತಿ ತೋರಿಸುತ್ತದೆ.

ಇದೆಲ್ಲಾ ಆದ್ಮೇಲೆ ರವಿ ಬಸ್ರೂರು ‘ಗಿರ್ಮಿಟ್’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಸುದ್ದಿ ಹೊರಬಿದ್ದಿತ್ತು. ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ ಗಿರ್ಮಿಟ್ ಚಿತ್ರವನ್ನು ಕನ್ನಡದ ಜೊತೆಗೆ ತಮಿಳು(ಪೊಡಿ ಮಾಸ್), ಮಲಯಾಳಂ(ಪೊಡಿ ಮಾಸ್), ತೆಲುಗು(ಪಕ್ಕಾ ಮಾಸ್) ಹಾಗೂ ಹಿಂದಿ(ಪಕ್ಕಾ ಮಾಸ್) ಭಾಷೆಗಳಲ್ಲಿ ಮೂಡಿ ಬರಲಿದೆ.

ಈಗ ರಿಲೀಸ್ ಮಾಡಿರುವ ಪೋಸ್ಟರ್ ನೋಡುತ್ತಿದ್ದರೆ, ಚಿತ್ರದ ಹೀರೋ ಯಾರು ಎಂದು ತಿಳಿದು ಬರುತ್ತಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸುದ್ದಿ ಹೊರಬೀಳಬಹುದೇನೊ.



ಭಾರವಿ, ಫಿಲಂ ಬ್ಯೂರೋ, ಕಹಳೆ ನ್ಯೂಸ್.














