
ಬೆಂಗಳೂರು: ನನಗೆ ಸಿಎಂ ಆಗುವ ಯಾವ ಆಸೆಯೂ ಇಲ್ಲ. ಮಂತ್ರಿಯಾಗಿದ್ದೇ ಸಾಕು ನನಗೆ, ಇದರಲ್ಲೇ ಒಳ್ಳೆಯ ಕೆಲಸ ಮಾಡುತ್ತೇನೆ ಅಂತಾ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ ಬಗ್ಗೆ ಚರ್ಚೆ ನಡೆಯುತ್ತಿರೋ ಹಿನ್ನೆಲೆ ಇಂದು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಹೆಚ್‍ಡಿ ರೇವಣ್ಣ, ನನಗೆ ಸಿಎಂ ಆಗುವ ಯಾವ ಆಸೆಯೂ ಇಲ್ಲ. ಅಂತಹ ಯೋಗ ಬಂದಾಗ ಅದನ್ನು ಯಾರೂ ತಡೆಯೋಕಾಗಲ್ಲ ಎಂದರು. ನನ್ನದು ಸ್ವಾತಿ ನಕ್ಷತ್ರ. ನನಗೆ ಮಾಟ ಮಂತ್ರ ಮಾಡಲು ಸಾಧ್ಯವಿಲ್ಲ. ಮಾಡಿದರೆ ಅವರಿಗೇ ಅದು ತಿರುಗು ಬಾಣವಾಗುತ್ತದೆ ಎಂದು ಹೇಳಿದ್ರು.
ಇದೇ ವೇಳೆ ಹಾಸನ ಜಿಲ್ಲಾಧಿಕಾರಿ ಜೊತೆ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರ ಜತೆಯೂ ಡಿಶುಂ, ಡಿಶುಂ ಮಾಡಬೇಕಾದ ಅಗತ್ಯವಿಲ್ಲ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ನಾನು ಮಾಹಿತಿ ಪಡೆದಿದ್ದೆ. ಬರ ಪರಿಹಾರಕ್ಕೆ 10 ಕೋಟಿ, ಹಾಗೂ 5 ಕೋಟಿ ಬಂದಿದ್ದರ ಬಗ್ಗೆ ಮಾಹಿತಿ ಸಿಕ್ಕಿತು. ಆದರೆ ಬಿಡುಗಡೆ ಮಾಡಿರಲಿಲ್ಲ. ಜಿಲ್ಲಾಡಳಿತದಲ್ಲಿ ನಾನು ತಲೆ ಹಾಕಲ್ಲ ಎಂದು ಹೇಳಿದರು.
ಮಾಧ್ಯಮಗಳ ಮುಂದೆ ಅನುದಾನ ಬಿಡುಗಡೆ ಮಾಡಲು ಹೇಳಿದ್ದೆ. ಆಲೂಗಡ್ಡೆ ಬಿತ್ತನೆಗೆ ಸಮಸ್ಯೆಯಾಗಬಾರದು. ಈ ಹಿಂದೆ ಇದೇ ಕಾರಣಕ್ಕೆ ಗೋಲಿಬಾರ್ ಆಗಿತ್ತು. ಹಿಂದಿನ ಜಿಲ್ಲಾಧಿಕಾರಿಗಳಿಗೆ ಇದರ ಬಗ್ಗೆ ಎಲ್ಲ ಮಾಹಿತಿ ಇದೆ. ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಿ ಅಂತ ಹೇಳಿದ್ದೇನೆ. ವೈಯಕ್ತಿಕ ಕಾರಣಗಳಿಂದ ಜಿಲ್ಲಾಧಿಕಾರಿ ಜತೆ ಹೊಡೆದಾಟ ಮಾಡಿಲ್ಲ. ಜನರ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಹಾಸನಕ್ಕೆ ಚುನಾವಣಾ ಆಯೋಗದವರೇ ಜಿಲ್ಲಾಧಿಕಾರಿಯನ್ನ ಹಾಕಿರೋದು. ಚುನಾವಣೆಯಲ್ಲಿ ದೇವೇಗೌಡರು, ಅವರ ಮಕ್ಕಳು ದುಡ್ಡು ಹಂಚ್ತಾರೆ ಅಂತಾ ಡಿಸಿಯನ್ನ ಹಾಕಿದ್ರು ಅಂತಾ ತಿರುಗೇಟು ನೀಡಿದ್ರು.









