
ಬಂಟ್ವಾಳ: ತಾಲೂಕಿನ 58 ಗ್ರಾಮ ಪಂಚಾಯತ್‍ಗಳ ಪೈಕಿ 21 ಗ್ರಾಮ ಪಂಚಾಯತ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ್ ಸಿ.ಇ.ಒ. ಸೆಲ್ವಮಣಿ ತಾಲೂಕು ಪಂಚಾಯತ್ ಇ.ಒ. ಅವರಿಗೆ ಆದೇಶ ಮಾಡಿದ್ದಾರೆ.
ಬಂಟ್ವಾಳ ತಾಲೂಕಿನ ಬಾಳೆಪುಣಿ, ಮತ್ತು ನರಿಂಗಾನ ಗ್ರಾಮ ಪಂಚಾಯತ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀರಾ ಉಂಟಾಗಿದ್ದು ಈ ಎರಡು ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಕೆಲಸ ಪಂಚಾಯತ್ ಮಾಡುತ್ತಿದೆ ಎಂದು ಸೆಲ್ವಮಣಿ ತಿಳಿಸಿದ್ದಾರೆ.
ಯಾವ ಯಾವ ಕಡೆಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ ಅಂತಹ ಗ್ರಾಮದಲ್ಲಿ ಬೋರ್‍ವೆಲ್ ಕೊರೆಯಲು ಜಿಲ್ಲಾ ಪಂಚಾಯತ್ .ಸಿ.ಇ.ಒ. 25 ಲಕ್ಷ ಅನುದಾನ ಬಿಡುಗಡೆಗೆ ಕ್ರಿಯಾ ಯೋಜನೆ ತಯಾರಿಸಲಾಗಿದ್ದು ಅಗತ್ಯ ಕಡೆಗಳಲ್ಲಿ ಈಗಾಗಲೇ ಬೋರ್‍ವೆಲ್ ಕೊರೆಯಲು ಆರಂಭಿಸಲಾಗಿದೆ ಎಂದು ಬಂಟ್ವಾಳ ತಾ.ಪಂ. ಇ.ಒ.ರಾಜಣ್ಣ ತಿಳಿಸಿದ್ದಾರೆ.
ಇನ್ನು ಕೆಲವು ಗ್ರಾಮ ಪಂಚಾಯತ್‍ಗಳಲ್ಲಿ ಬೇಡಿಕೆ ಬಂದರೆ 14ನೇ ಹಣಕಾಸು ಯೋಜನೆಯಲ್ಲ್ಲಿ ಬೋರ್‍ವೆಲ್ ಕೊರೆಯಲು ಅವಕಾಶ ನೀಡಲಾಗಿದೆ. ಪ್ರಸ್ತುತ ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಇ.ಒ. ತಿಳಿಸಿದ್ದಾರೆ.
ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಪುಗುಡ್ಡೆಯಲ್ಲಿ ಕಳೆದ 22 ದಿನಗಳಿಂದ ಕುಡಿಯುವ ನೀರು ಇಲ್ಲದೆ ಇಲ್ಲಿನ ನಿವಾಸಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಪಂಚಾಯತ್‍ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕೇವಲ ಒಂದೇ ಒಂದು ಬಾರಿ ಟ್ಯಾಂಕರ್ ನೀರು ಕಳುಹಿಸಿ ಕೈ ತೊಳೆದುಕೊಂಡು ಮೌನವಾಗಿ ಕುಳಿತಿದೆ. ಅ ಬಳಿಕ ಎಷ್ಟು ಅಂಗಲಾಚಿದರೂ ನೀರು ಕಳುಹಿಸುವ ಕೆಲಸ ಮಾಡಿಲ್ಲ. ಪಿಡಿಒ ಅವರಿಗೆ ಫೋನ್ ಮಾಡಿದರೆ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇಲ್ಲಿನ ನಾಗರಿಕರು ತೀರಾ ಬಡವರಾಗಿದ್ದು ಒಂದು ಹೊತ್ತು ಊಟ ಮಾಡುವುದು ಕಷ್ಟದ ಪರಿಸ್ಥಿತಿಯಲ್ಲಿ ಅಂತಹ ಪರಿಸರದ ನಿವಾಸಿಗಳು ಬೇರೆ ವಿಧಿ ಇಲ್ಲದೆ ಟ್ಯಾಂಕರ್ ಮೂಲಕ ನೀರು ತರಿಸುತ್ತಿದ್ದಾರೆ.
ಇನ್ನು ಕೇವಲ ಎರಡು ದಿನ ಕಾಯುತ್ತೇವೆ ಅಗಲೂ ಪಂಚಾಯತ್ ನವರು ವ್ಯವಸ್ಥೆ ಮಾಡದಿದ್ದರೆ ಅಮ್ಟಾಡಿ ಗ್ರಾಮ ಪಂಚಾಯತ್‍ನಲ್ಲಿ ಹೋಗಿ ಧರಣಿ ಕುಳಿತು ಕೊಳ್ಳುತ್ತೇವೆಂದು ಆಕ್ರೋಶ ವ್ಯಕ್ತಪಡಿಸಿದರು.
ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯದೇ ರೀತಿ ಕಾವಳಪಡೂರು ಗ್ರಾಮದ ಕಾಡಬೆಟ್ಟು ಎಂಬಲ್ಲಿಯೂ ಕುಡಿಯುವ ನೀರಿ ಸಮಸ್ಯೆ ಉಂಟಾಗಿದ್ದು ಇಲ್ಲೂ ಪಂಚಾಯತ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಒಟ್ಟು 21 ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಲು ಪಿ.ಡಿ.ಒ.ಗಳು ಕೈಗೊಳ್ಳುವಂತೆ ತಾಲೂಕು ಪಂಚಾಯತ್ ಇ.ಒ. ರಾಜಣ್ಣ ತಿಳಿಸಿದ್ದಾರೆ.














