ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ-2026 : ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಶಿಸ್ತುಬದ್ಧವಾದ ಪಥಸಂಚಲನ

ಕ್ರೀಡೆಯು ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡಾ ಮನೋಭಾವವನ್ನು
ಬೆಳೆಸಿಕೊಳ್ಳಬೇಕು ಹಾಗೂ ಕ್ರೀಡಾರಂಗದಲ್ಲಿ ಮುಂಚೂಣಿಗೆ ಬಂದು ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವಂತಾಗಬೇಕು. ಕ್ರೀಡಾ ಕೌಶಲ್ಯಗಳು ವ್ಯಕ್ತಿಯನ್ನು ಜೀವನದ ಉನ್ನತ ಶಿಖರಕ್ಕೆ ಕೊಂಡೊಯ್ಯುತ್ತವೆ. ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ವೇದಿಕೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪದಕ ಹಾಗೂ ಸಾಧನೆಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು. ಕ್ರೀಡೆಯು ಜಾತಿ, ಧರ್ಮ ಮತ್ತು ಪಂಗಡಗಳ ಎಲ್ಲೆಗಳನ್ನು ಮೀರಿದ ಒಂದು ಉದಾತ್ತ ವಿಚಾರವಾಗಿದೆ. ಇಂದಿನ ಯುವ ಪೀಳಿಗೆಯ ಆರೋಗ್ಯ ಸ್ಥಿತಿಯನ್ನು ಗಮನಿಸಿದಾಗ, ಕ್ರೀಡೆ ಎಂಬುದು ಪ್ರತಿಯೊಬ್ಬರಿಗೂ ಅತ್ಯಂತ ಅನಿವಾರ್ಯ ಹಾಗೂ ಅತ್ಯಗತ್ಯವಾಗಿದೆ ಎಂದು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಎ. ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಇವರು ವಿವೇಕಾನಂದ
ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ, ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿಕೊಟ್ಟರು.
ಕಾರ್ಯಕ್ರಮದ ಪ್ರಧಾನ ಅಭ್ಯಾಗತರಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಶ್ರೀಮತಿ ಮಹಾಲಕ್ಷ್ಮಿ ಅವರು ಮಾತನಾಡಿ, ಸ್ಪರ್ಧೆಯಲ್ಲಿ ಗೆಲುವು ಸಾಧಿಸಬೇಕೆಂಬುದು ಪ್ರತಿಯೊಬ್ಬರ ಸಹಜ ಹಂಬಲವಾಗಿರುತ್ತದೆ. ಆದರೆ ಗೆಲುವೊಂದೇ ಕ್ರೀಡೆಯ ಅಂತಿಮ ಗುರಿಯಲ್ಲ; ಬದಲಿಗೆ ಸಕ್ರಿಯವಾಗಿ ಪಾಲ್ಗೊಳ್ಳುವುದು ಅತ್ಯಂತ ಪ್ರಮುಖವಾದುದು. ಪ್ರತಿಯೊಂದು ಕ್ಷೇತ್ರದಲ್ಲೂ ಸಿಗುವ ಇಂತಹ ವೇದಿಕೆಗಳಲ್ಲಿ ಭಾಗವಹಿಸುವುದರಿಂದ ನಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹಾಗೂ ಕೌಶಲ್ಯಗಳು ಅನಾವರಣಗೊಳ್ಳಲು ಸಾಧ್ಯ,ಎಂದು ಕ್ರೀಡಾಪಟುಗಳ ಕ್ರೀಡಾ ಸ್ಫೂರ್ತಿಗೆ ಶುಭ ಹಾರೈಸಿದರು. ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಕ್ರೀಡಾಸಮವಸ್ತ್ರವನ್ನು ಧರಿಸಿದ ಕಾಲೇಜಿನ ವಿದ್ಯಾರ್ಥಿಗಳು ಶಿಸ್ತುಬದ್ಧವಾದ ಪಥಸಂಚಲನವನ್ನು
ನಡೆಸಿದರು. ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ಕಾಲೇಜಿನ ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ಬೆಳಗಿಸಿ ಉದ್ಘಾಟಕರಿಗೆ ಹಸ್ತಾಂತರಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ವಿ.ಎಸ್ ಅವರ ಮಾರ್ಗದರ್ಶನದೊಂದಿಗೆ ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಕೆಮ್ಮಿಂಜೆ ಎಲ್ಲಾ ಕ್ರೀಡಾಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲರಾದ ದೇವಿಚರಣ್ ರೈ ಎಂ, ದೈಹಿಕ ಶಿಕ್ಷಣ ನಿರ್ದೇಶಕರಾದ ಯತೀಶ್ ಕುಮಾರ್ ಬಿ, ಡಾ. ಜ್ಯೋತಿಕುಮಾರಿ ಪಿ.ಸಿ,
ಉಪನ್ಯಾಸಕ, ಉಪನ್ಯಾಸಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಕ್ರೀಡಾ ಜತೆ ಕಾರ್ಯದರ್ಶಿಯಾದ ಡಿಂಪಲ್ ಶೆಟ್ಟಿ ಸ್ವಾಗತಿಸಿ, ವಿದ್ಯಾರ್ಥಿ ಮನ್ವಿತ್ ವಂದಿಸಿದರು. ಉಪನ್ಯಾಸಕರಾದ ಪಿ. ಕೆ. ಪರಮೇಶ್ವರ ಶರ್ಮ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.











