ಘಟಿಕೋತ್ಸವದಲ್ಲಿ ಪರಮೇಶ್ವರ್, ರಾಯರೆಡ್ಡಿ ಸಮ್ಮುಖದಲ್ಲಿ ಮೊಳಗಿದ ಪೂರ್ಣ ವಂದೇಮಾತರಂ ಗೀತೆ – ಕಹಳೆ ನ್ಯೂಸ್

ಬೆಳಗಾವಿ: ಇಲ್ಲಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ ಘಟಿಕೋತ್ಸವ ಆರಂಭದಲ್ಲಿ ವಂದೇ ಮಾತರಂ ಪೂರ್ತಿ ಗೀತೆ ಮೊಳಗಿತು.
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಉಪಮುಖ್ಯಮಂತ್ರಿ ಡಾ. ಜಿಪರಮೇಶ್ವರ ಹಾಗೂ ಸಚಿವ ಬಸವರಾಜ ರಾಯರೆಡ್ಡಿ ಸೇರಿ ಹಲವರು ಆರು ಚರಣಗಳ ಸಂಪೂರ್ಣ ವಂದೇ ಮಾತರಂ ಗೀತೆಗೆ ಗೌರವ ಸಲ್ಲಿಸಿದರು.
ರಾಜ್ಯ ಸರ್ಕಾರ ಕೇವಲ ಎರಡು ಚರಣ ವಂದೇ ಮಾತರಂ ಗೆ ಆದೇಶ ಹೊರಡಿಸಿದ್ದರೂ ರಾಜ್ಯಪಾಲರ ಸೂಚನೆಯಿಂದಾಗಿ ವಿಟಿಯು ಘಟಿಕೋತ್ಸವದಲ್ಲಿ ಸಂಪೂರ್ಣ ಗೀತೆ ಮೊಳಗಿತು. ಜತೆಗೆ ರಾಷ್ಟ್ರಗೀತೆ ಹಾಗೂ ನಾಡಗೀತೆಗಳೂ ಮೊಳಗಿದವು.
ಘಟಿಕೋತ್ಸವದಲ್ಲಿ 52,025 (ಶೇ.90 16) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ ಬಿ.ಟೆಕ್, ಬಿ.ಇ-51,421, ಬಿ.ಇ.ಆರ್ಕ್ 586, ಬಿ.ಪ್ಲಾನ್ 12 ಮತ್ತು ಬಿ.ಎಸ್ಸಿ, ಆನರ್ಸ್ ವಿದ್ಯಾರ್ಥಿಗಳು ಸೇರಿದ್ದಾರೆ.ಎಲ್ಲರಿಗೂ ಪದವಿ ನೀಡಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಸಿಎಂಆರ್ ಜ್ಞಾನಧಾರ ಟ್ರಸ್ಟ್ ನ ಅಧ್ಯಕ್ಷ ಡಾ.ಸಬಿತಾ ರಾಮಮೂರ್ತಿ, ಆರ್.ವಿ. ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಪಿ.ಶ್ಯಾಮ್, ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಂ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.










