Sunday, September 27, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮೈಸೂರು ಕಂಬಳಕ್ಕೆ 160 ಜೋಡಿ ಕೋಣಗಳು ಪಾಲ್ಗೊಳ್ಳಲಿವೆ – ಕಹಳೆ ನ್ಯೂಸ್

ಮಂಗಳೂರು: ದಸರಾ ಅಂಗವಾಗಿ ಮೈಸೂರಿನಲ್ಲಿ ರಾಜ್ಯ ಸರ್ಕಾರದಿಂದ ಆಯೋಜಿಸಿರುವ ಕಂಬಳ ಅ. 18 ಮತ್ತು 19ರಂದು ನಡೆಯಲಿದ್ದು, 160 ಜೋಡಿ ಕೋಣಗಳು ಪಾಲ್ಗೊಳ್ಳಲಿವೆ ಎಂದು ಇದರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶಾಸಕ ಅಶೋಕ್ ಕುಮಾರ್‌ ರೈ ತಿಳಿಸಿದರು.

ಜಾಹೀರಾತು

ಮೈಸೂರು ಕಂಬಳಕ್ಕೆ ಕೋಣಗಳನ್ನು ಕರೆದೊಯ್ಯುವ ಸಿದ್ಧತೆ ಕುರಿತು ಇಲ್ಲಿ ಶುಕ್ರವಾರ ಇಲ್ಲಿ ನಡೆದ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

‘ಮೈಸೂರು ಕಂಬಳದಲ್ಲಿ ಭಾಗವಹಿಸಲು ಸುಮಾರು 200 ಜೋಡಿ ಕೋಣಗಳ ಮಾಲೀಕರು ಆಸಕ್ತಿ ತೋರಿಸಿದ್ದಾರೆ. ಆಯ್ದ 160 ಜೋಡಿ ಕೋಣಗಳಿಗಷ್ಟೇ ಅವಕಾಶ ನೀಡಲಿದ್ದೇವೆ. ಕೋಣಗಳ ಆಯ್ಕೆಗೆ ಉಪಸಮಿತಿ ರಚಿಸಲಿದ್ದೇವೆ. ಕೋಣಗಳು ತಂಗಲು ಐದು ಎಕರೆಯಷ್ಟು ಜಾಗ ಗುರುತಿಸಿದ್ದೇವೆ. ಕೆಲವು ಕೋಣಗಳಿಗೆ ಮಾಲೀಕರು ಇಲ್ಲಿನ ನೀರನ್ನೇ ಕುಡಿಸಲು ಬಯಸುತ್ತಾರೆ. ಅದಕ್ಕೂ ವ್ಯವಸ್ಥೆ ಕಲ್ಪಿಸುತ್ತೇವೆ. ವೀಕ್ಷಕ ವಿವರಣೆಯನ್ನು ತುಳು ಹಾಗೂ ಕನ್ನಡ ಭಾಷೆಗಳೆರಡರಲ್ಲೂ ನೀಡಲಿದ್ದೇವೆ. ಕೋಣಗಳ ಜೊತೆ ಸೆಲ್ಫಿ ತೆಗೆಯಲು ಅವಕಾಶ ಮಾಡಲಿದ್ದೇವೆ. ತುಳುನಾಡಿನ ಪರಂಪರೆ ಹಾಗೂ ತಿನಿಸುಗಳ ಮಳಿಗೆಗಳು ಇರಲಿವೆ’ ಎಂದರು.

ಮೈಸೂರು ಅರಮನೆಯಿಂದ ಸುಮಾರು 7 ಕಿ.ಮೀ ದೂರದಲ್ಲಿ 20 ಎಕರೆ ಜಾಗದಲ್ಲಿ ಕಂಬಳವನ್ನು ಆಯೋಜಿಸಲಾಗುತ್ತದೆ. ಕೋಣಗಳನ್ನು ಓಡಿಸುವುದಕ್ಕೆ 147 ಮೀ. ಉದ್ದದ ‘ವಿಜಯ’ ಮತ್ತು ‘ದಶಮಿ’ ಎಂಬ ಎರಡು ಕರೆಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಏಕಕಾಲದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಬಹುದು. ಒಟ್ಟು ಮೂರು ವೇದಿಕೆಗಳನ್ನು ನಿರ್ಮಿಸಲಾಗುತ್ತಿದ್ದು, ಮುಖ್ಯ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿವೆ. ಪಕ್ಕದ ವೇದಿಕೆಗಳಲ್ಲಿ ಗಣ್ಯರಿಗೆ ಹಾಗೂ ಅತಿ ಗಣ್ಯರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬೆಳಿಗ್ಗೆಯಿಂದ ಮಧ್ಯಾಹ್ನ ಮಧ್ಯಾಹ್ನದಿಂದ ಸಂಜೆ ಹಾಗೂ ಸಂಜೆ ಯಿಂದ ರಾತ್ರಿವರೆಗೆ ಮೂರು ಪಾಳಿಯಲ್ಲಿ ಕಂಬಳ ವೀಕ್ಷಣೆಗೆ ಸಮಯ ಗೊತ್ತುಪಡಿಸಲಾಗುವುದು. ಪಾಸ್‌ ಇಲ್ಲದವರಿಗೂ ಕಂಬಳ ವೀಕ್ಷಿಸಲು ಅನುವು ಮಾಡಿಕೊಡಲಿದ್ದು, ಇದಕ್ಕಾಗಿ 5 ಸಾವಿರ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಸುಮಾರು 25 ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಅ. 16 ರಂದು ಬೆಳಿಗ್ಗೆ 10.30ಕ್ಕೆ ಕಂಬಳದ ಕೋಣಗಳು ಹೊರಡಲಿವೆ. ಮಡಿಕೇರಿ ತಲುಪಿದ ಬಳಿಕ ಅವುಗಳಿಗೆ ಮೇವು ತಿನ್ನಿಸಿ ಮೂರು ಗಂಟೆ ವಿಶ್ರಾಂತಿ ನೀಡಲಾಗುತ್ತದೆ. ಅದೇ ದಿನ ರಾತ್ರಿ ಮೈಸೂರು ತಲುಪಲಿವೆ. 17 ರಂದು ಕೋಣಗಳಿಗೆ ವಿಶ್ರಾಂತಿ ನೀಡಲಾಗುತ್ತದೆ. ಕಂಬಳದಲ್ಲಿ ಭಾಗವಹಿಸುವ ದೊಡ್ಡ ಕೋಣಗಳ ಜೋಡಿಗೆ ₹ 65 ಸಾವಿರ ಹಾಗೂ ಚಿಕ್ಕ ಕೋಣಗಳ ಜೋಡಿಗೆ ₹50 ಸಾವಿರ ಸಾಗಾಣೆ-ಮೇವಿನ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದರು.

ಹಿರಿಯ ವಿಭಾಗದಲ್ಲಿ ಮೊದಲ ಬಹುಮಾನ ಗೆಲ್ಲುವ ಕೋಣಗಳ ಮಾಲೀಕರಿಗೆ 16 ಗ್ರಾಂ ಚಿನ್ನ ಹಾಗೂ ಎರಡನೇ ಬಹುಮಾನಕ್ಕೆ 8 ಗ್ರಾಂ ಚಿನ್ನವನ್ನು ನೀಡಲಾಗುತ್ತದೆ. ಮೂರು ಮತ್ತು ನಾಲ್ಕನೇ ಬಹುಮಾನಗಳನ್ನೂ ನೀಡಬೇಕೆಂಬ ಬೇಡಿಕೆ ಇದೆ. ಕಿರಿಯ ವಿಭಾಗದಲ್ಲಿ ಮೊದಲ ಬಹುಮಾನಕ್ಕೆ 8 ಗ್ರಾಂ ಚಿನ್ನ ಹಾಗೂ ಎರಡನೇ ಬಹುಮಾನಕ್ಕೆ 5 ಗ್ರಾಂ ಚಿನ್ನವನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಉಪಸ್ಥಿತರಿದ್ದರು.

ರೈತರ ಜನಪದ ಕ್ರೀಡೆಯಾಗಿರುವ ಕಂಬಳ ತುಳುನಾಡು ಮತ್ತು ಕರುನಾಡಿಗೆ ಸಂಬಂಧ ಬೆಸೆಯುವ ಕೊಂಡಿಯಾಗಲಿದೆ. ರಾಜ್ಯದ ಜನ‌ ಮೆಚ್ಚುವಂತೆ ಶಿಸ್ತಿನಿಂದ ಮೈಸೂರಿನ ಕಂಬಳವನ್ನು ಆಯೋಜಿಸುತ್ತೇವೆ. ದೇವಿಪ್ರಸಾದ್‌ ಶೆಟ್ಟಿ, ರಾಜ್ಯ ಕಂಬಳ ಸಮಿತಿ ಅಧ್ಯಕ್ಷ