
ಬಂಟ್ವಾಳ: ವ್ಯಕ್ತಿಯೊಬ್ಬರ ಮೇಲೆ ತಲವಾರು ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಪ್ರಶಾಂತ್ ಬೆಳ್ಚಾಡ್ (41) ಎಂಬವರು ನೀಡಿದ ದೂರಿನಂತೆ, ಸೆಪ್ಟೆಂಬರ್ 20ರಂದು ಸಂಜೆ ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆ ಎಂಬಲ್ಲಿ ಘಟನೆ ನಡೆದಿದೆ.
ದೂರಿನ ಪ್ರಕಾರ, ಅಮ್ಮುಂಜೆ ನಿವಾಸಿ ಪ್ರಶಾಂತ್ (38), ತೆಂಕಬೆಳ್ಳೂರು ನಿವಾಸಿ ರಾಮದಾಸ್ (43) ಹಾಗೂ ಬಡಗಬೆಳ್ಳೂರು ನಿವಾಸಿ ಶಂಕರ (45) ಎಂಬವರು ಆಟೋರಿಕ್ಷಾದಲ್ಲಿ ಬಂದು ತಲವಾರು ಹಾಗೂ ಕಬ್ಬಿಣದ ರಾಡ್‌ನಿಂದ ಪ್ರಶಾಂತ್ ಬೆಳ್ಚಾಡ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಪ್ರಶಾಂತ್ ಬೆಳ್ಚಾಡ್ ಅವರಿಗೆ ಗಂಭೀರ ರಕ್ತಗಾಯಗಳಾಗಿದ್ದು, ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಗಾಯಗೊಂಡ ವ್ಯಕ್ತಿಯ ಪರಿಚಯದವರು ಸ್ಥಳಕ್ಕೆ ಬರುತ್ತಿರುವುದನ್ನು ಕಂಡ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 124/2026, BNSನ ಕಲಂ 109, 352, 351 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಆರೋಪಿಗಳಾದ ಪ್ರಶಾಂತ್, ರಾಮದಾಸ್ ಹಾಗೂ ಶಂಕರ ಅವರನ್ನು ಬಂಧಿಸಿದ್ದಾರೆ. ಸೆಪ್ಟೆಂಬರ್ 25ರಂದು ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ಅನುಮತಿ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.










