
ಪುತ್ತೂರು: ನಮ್ಮ ನಾಡಿನ ಹೆಮ್ಮೆಯ ಪುತ್ರ, ದೇಶ ಕಂಡ ಅಪ್ರತಿಮ ವಿಜ್ಞಾನಿ ಸರ್.ಎಂ.ವಿಶ್ವೇಶ್ವರಯ್ಯನವರು ಕಲಿಸಿಕೊಟ್ಟ ಶ್ರಮ ಮತ್ತು ಪ್ರಾಮಾಣಿಕತೆಯ ಪಾಠವನ್ನು
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ತನ್ಮೂಲಕ ದೇಶದ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ಸಿವಿಲ್ ಇಂಜಿನಿಯರಿಂಗ್
ಸೊಲ್ಯುಶನ್ಸ್ ನ ಸುದೀಪ ಶೆಟ್ಟಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಸಿವಿಲ್ ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಇಂಜಿನಿಯರ್ಸ್ ಡೇ ಆಚರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತಾಡಿದರು. ಪಾಠದ ಜತೆಯಲ್ಲಿ ಅದಕ್ಕೆ ಪೂರಕವಾದ ಪ್ರಾಯೋಗಿಕ ಅನುಭವಗಳನ್ನು ಪಡೆದುಕೊಳ್ಳುವುದು ಆವಶ್ಯಕ ಅದಕ್ಕಾಗಿ ವಿವಿಧ ನಿರ್ಮಾಣದ ಸ್ಥಳಗಳಿಗೆ ಭೇಟಿ ನೀಡಿ ಅದರ ಕಾರ್ಯವಿಧಾನಗಳನ್ನು ಅರಿತುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಹೇಳಿದರು. ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಬೇಡಿಕೆ ಕಡಿಮೆಯಾಗಿಲ್ಲ ಬದಲಾಗಿ ಆವಶ್ಯಕತೆಯನ್ನು ಪೂರೈಸುವಷ್ಟು ಸಿವಿಲ್ ಇಂಜಿನಿಯರುಗಳು ಲಭ್ಯರಿಲ್ಲ ಎಂದು
ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ, ಅದಮ್ಯ ಚೇತನ, ಕ್ರಮನಿಷ್ಟವಾದ ಜೀವನ ಶೈಲಿ, ದೇಶಕ್ಕಾಗಿ ಕೆಲಸ ಮಾಡುವ ತುಡಿತ ಇವುಗಳಿಂದಾಗಿ
ಸರ್.ಎಂ.ವಿಶ್ವೇಶ್ವರಯ್ಯನವರು ದೇಶದ ಇತಿಹಾಸದಲ್ಲಿ ಹೊಸ ಆಯಾಮವನ್ನೇ ಹುಟ್ಟುಹಾಕಿದರು ಎಂದು ಹೇಳಿದರು. ಉತ್ತಮವಾದ ಕಾರ್ಯಯೋಜನೆಯನ್ನು ತಯಾರಿಸಿ ಅದನ್ನು ಸರಿಯಾಗಿ ಅನುಷ್ಠಾನಗೊಳಿಸುವವನು ಮಾತ್ರ ಶ್ರೇಷ್ಟ ಇಂಜಿನಿಯರ್ ಆಗಬಲ್ಲ ಎಂದರು. ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ ಸ್ವಾಗತಿಸಿದರು. ಪ್ರೊ.ಶಂಕರಗಿರಿ.ಕೆ.ಎಸ್ ವಿಶ್ವೇಶ್ವರಯ್ಯನವರ ಸಾಧನೆಯ ಬಗ್ಗೆ ಮಾಹಿತಿ ನೀಡಿದರು. ಸಿವಿಲ್ ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ಶ್ಯಾಮ್‍ಕುಮಾರ್ ವಂದಿಸಿದರು. ವಿದ್ಯಾರ್ಥಿನಿ ಪೃಥ್ವಿ ಕಾರ್ಯಕ್ರಮ ನಿರ್ವಹಿಸಿದರು.










