ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ‘ಕಲಾಸಂಗಮ 2K26’ ಸ್ಥಳೀಯ ಪದವಿ ಪೂರ್ವ ಕಲಾ ಪ್ರತಿಭೆಗಳ ಅನಾವರಣ – ಕಹಳೆ ನ್ಯೂಸ್

ಸುಳ್ಯ, ಅ. 20: ನೆಹರು ಮೆಮೋರಿಯಲ್ ಕಾಲೇಜು, ಸುಳ್ಯದ ಸಾಂಸ್ಕೃತಿಕ ಸಂಘದ ವತಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ‘ಕಲಾಸಂಗಮ 2K26′ ಕಾರ್ಯಕ್ರಮವು ಆಗಸ್ಟ್ 20 ರಂದು ಕಾಲೇಜಿನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ವ್ಯಕ್ತಿತ್ವ ಬೆಳವಣಿಗೆಗೆ, ಸರ್ವತೋಮುಖ ಅಭಿವೃದ್ಧಿಗೆ ಕಲೆ ಹಾಗೂ ಇನ್ನಿತರ ಹವ್ಯಾಸಗಳು ಉತ್ತಮವಾದದ್ದು. ಹವ್ಯಾಸಗಳು ವ್ಯಕ್ತಿಯಾಗಿ ಬದುಕನ್ನು ರೂಪಿಸಬಲ್ಲುದು. ಶೈಕ್ಷಣಿಕ ಚಟುವಟಿಕೆಗಳ ಜೊತೆ ಪ್ರತಿಭೆಗಳನ್ನು ಪೋಷಿಸಲು ಇಂತಹ ಕಾರ್ಯಕ್ರಮಗಳು ದಾರಿದೀಪವಾಗಲಿವೆ. ಸದವಕಾಶಗಳನ್ನು ಸದುಪಯೋಗವಡಿಸಿಕೊಂಡು ಬದುಕು ರೂಪಿಸಿಕೊಳ್ಳಿ ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಗಾಂಧಿನಗರದ ಪ್ರಾಂಶುಪಾಲರಾದ ಪರಮೇಶ್ವರಿ ಎಚ್ ಆರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ. ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಶಶ್ಮಿ ಭಟ್ ಉಪಸ್ಥಿತರಿದ್ದರು. ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಮಮತಾ ಕೆ. ಸ್ವಾಗತಿಸಿ, ಸಾಂಸ್ಕೃತಿಕ ಸಮಿತಿಯ ಸಂಯೋಜಕರಾದ ವಿಷ್ಣುಪ್ರಶಾಂತ್ ಬಿ. ಉಪಸ್ಥಿತರಿದ್ದು ವಂದಿಸಿದರು. ಕುಚಿಪುಡಿ ನೃತ್ಯದಲ್ಲಿ ಗೋಲ್ಡನ್ ಬುಕ್ ಓಪ್ ರೆಕಾರ್ಡ್ ಮಾಡಿರುವ ವಿದ್ಯಾರ್ಥಿ ಅಭಿಷೇಕ್ ಪ್ರಾರ್ಥಿಸಿ, ಕು. ಪ್ರೀಕ್ಷಾ, ಕು. ಮತ್ತು ಕು. ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪದವಿ ಪೂರ್ವ ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಹಾಗೂ ಕಲಾ ಸಾಮರ್ಥ್ಯವನ್ನು ಅನಾವರಣಗೊಳಿಸುವ ವಿವಿಧ ಸಾಂಸ್ಕೃತಿಕ ಹಾಗೂ ಪ್ರತಿಭಾ ಪ್ರದರ್ಶನಗಳು ಜರುಗಿದವು. ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಉತ್ಸಾಹಭರಿತವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮಧುರ ಎಂ ಆರ್ ಮತ್ತು ಕೆವಿಜಿ ಸಾಂಸ್ಕೃತಿಕ ಸಂಯೋಜಕ ಕಾರ್ತಿಕ್ ಕುಡೆಕಲ್ಲು ಭಾಗವಹಿಸಿ ಬಹುಮಾನ ವಿತರಿಸಿದರು.
ಈ ಬಾರಿಯ ಕಲಾಸಂಗಮ 2026ರ ಚಾಂಪಿಯನ್ಸ್ ಆಗಿ ರೋಟರಿ ಪದವಿ ಪೂರ್ವ ಕಾಲೇಜು ಹೊರಹೊಮ್ಮಿದ್ದು, ರನ್ನರ್ಸ್ ಟ್ರೋಫಿ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಪಡೆದುಕೊಂಡಿತು.
ಯುವ ಪ್ರತಿಭೆಗಳಿಗೆ ತಮ್ಮ ಕಲಾ ಕೌಶಲ್ಯವನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ಒದಗಿಸುವುದರ ಜೊತೆಗೆ, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ಸ್ನೇಹ, ಸೌಹಾರ್ದತೆ ಹಾಗೂ ಸಾಂಸ್ಕೃತಿಕ ವಿನಿಮಯಕ್ಕೆ ‘ಕಲಾಸಂಗಮ 2K26’ ಉತ್ತಮ ವೇದಿಕೆಯಾಯಿತು.
13 ವಿವಿಧ ಪದವಿ ಪೂರ್ವ ಕಾಲೇಜುಗಳಿಂದ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಕಾರ್ಯಕ್ರಮದಲ್ಲಿ ಸುಳ್ಯದ ವಿವಿಧ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು, ನೆಹರು ಮೆಮೋರಿಯಲ್ ಪದವಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











