
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣಜೈಲಿನಲ್ಲಿ ಮೊಬೈಲ್ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾಗಿತ್ತು. ಅದಾದ ಬಳಿಕ ಪ್ರಜ್ವಲ್ ಜೈಲಿನಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಇಲಾಖಾ ತನಿಖೆ ನಡೆಸಿದಾಗ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, 2024ರ ಸೆಪ್ಟೆಂಬರ್ ತಿಂಗಳಲ್ಲಿ ರೆಕಾರ್ಡ್ ಮಾಡಿದ್ದ ವಿಡಿಯೋ ಈಗ ವೈರಲ್ ಆಗಿರುವುದಾಗಿ ತಿಳಿದುಬಂದಿದೆ.
ಕಳೆದ 2 ವರ್ಷಗಳಿಂದ ಮೊಬೈಲ್ ಬಳಸುತ್ತಿರುವ ಪ್ರಜ್ವಲ್:
ಪ್ರಜ್ವಲ್ ರೇವಣ್ಣ 2024ರಿಂದಲೂ ಜೈಲಿನಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದು, 2024ರ ಸೆಪ್ಟೆಂಬರ್ ತಿಂಗಳಲ್ಲಿ ಪ್ರಜ್ವಲ್ ಮೊಬೈಲ್ ಬಳುತ್ತಿದ್ದಾಗ ರೂಮ್ ಮೇಟ್ ಓರ್ವ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು ಎನ್ನಲಾಗಿದೆ.
ಜೈಲಿನಲ್ಲಿ ಅಧಿಕಾರಿಗಳು ಪದೇ ಪದೇ ದಾಳಿ ನಡೆಸಿದ್ದರೂ ಕೂಡ ಜೈಲು ಸಿಬ್ಬಂದಿಯ ಸಹಾಯದಿಂದ ಪ್ರಜ್ವಲ್ ರೇವಣ್ಣ ಬಚಾವ್ ಆಗುತ್ತಿದ್ದರು. ಇದುವರೆಗೆ ಒಟ್ಟು 6 ಬಾರಿ ಇಂತಹ ದಾಳಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂಬ ಆಘಾತಕಾರಿ ಅಂಶ ಬಯಲಾಗಿದೆ.











