
ರಾಮನಗರ: ಇಲ್ಲಿನ ಕರಗ ಮಹೋತ್ಸವದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭಾಷಣ ಆರಂಭಿಸಲು ಮುಂದಾದ ವೇಳೆ ನಟ ದರ್ಶನ್ ಅಭಿಮಾನಿಗಳು ನಿರಂತರವಾಗಿ ʻಡಿ ಬಾಸ್, ಡಿ ಬಾಸ್ʼ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ.
ವೇದಿಕೆಯಲ್ಲಿ ಸಿಎಂ ಮೈಕ್ ಹಿಡಿಯುತ್ತಿದ್ದಂತೆಯೇ ಅಭಿಮಾನಿಗಳ ಘೋಷಣೆ ಜೋರಾಗಿದ್ದು, ಭಾಷಣಕ್ಕೆ ಕೆಲಕಾಲ ಅಡಚಣೆ ಉಂಟಾಯಿತು. ಘೋಷಣೆಗಳು ಮುಂದುವರಿದ ಕಾರಣ ಮುಖ್ಯಮಂತ್ರಿ ಕೆಲ ಹೊತ್ತು ಭಾಷಣ ನಿಲ್ಲಿಸಿ ಪರಿಸ್ಥಿತಿಯನ್ನ ಸಮಾಧಾನಗೊಳಿಸಲು ಪ್ರಯತ್ನಿಸಿದರು.
ಕಾರ್ಯಕ್ರಮದ ವೇಳೆ ಸಿಎಂ ಡಿ.ಕೆ. ಶಿವಕುಮಾರ್ ಹಲವು ಬಾರಿ ಕುರ್ಚಿಯಿಂದ ಎದ್ದು ಮತ್ತೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ವೇದಿಕೆಯಲ್ಲಿದ್ದವರು ಅಭಿಮಾನಿಗಳನ್ನ ಶಾಂತಗೊಳಿಸಲು ಮನವಿ ಮಾಡಿದರು. ಈ ವೇಳೆ ಅಭಿಮಾನಿಗಳು ನಿರಂತರವಾಗಿ ʻಡಿ ಬಾಸ್ʼ ಜೈಕಾರ ಕೂಗುತ್ತಲೇ ಇದ್ದರು. ಇದೇ ಸಂದರ್ಭದಲ್ಲಿ ಪಟಾಕಿ ಸಿಡಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಲಾಯಿತು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಮುಖ್ಯಮಂತ್ರಿಗಳು ತಮ್ಮ ಭಾಷಣ ಮುಂದುವರಿಸಿದರು.











