Saturday, May 23, 2026
ರಾಜ್ಯಸುದ್ದಿ

ರಾಷ್ಟ್ರೀಯ ಪಂಚಾಯತ್ ಪುರಸ್ಕಾರ ಪ್ರದಾನ ಸಮಾರಂಭ: ಪ್ರಶಸ್ತಿ ವಿಜೇತ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಿಗೂ ದೆಹಲಿಗೆ ತೆರಳಲು ಅವಕಾಶ ಕಲ್ಪಿಸಲು ಸಚಿವ ಪ್ರಿಯಾಂಕ್ ಖರ್ಗೆಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ -ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯದಿಂದ ನೀಡಲಾಗುವ ‘ರಾಷ್ಟ್ರೀಯ ಪಂಚಾಯತ್ ಪುರಸ್ಕಾರ’ (NPA) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಪ್ರಶಸ್ತಿ ವಿಜೇತ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳ (PDO) ಜೊತೆಗೆ ಆಯಾ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಿಗೂ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರನ್ನು ಗುರುವಾರದಂದು ಬೆಂಗಳೂರಿನಲ್ಲಿ ಖುದ್ದಾಗಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಸ್ಥಳೀಯ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ ನೀಡಲಾಗುವ ‘ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ’ ವಿಭಾಗದಲ್ಲಿ ಉಡುಪಿ ಜಿಲ್ಲೆಯ 5 ಗ್ರಾಮ ಪಂಚಾಯತಿಗಳು ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಗಿರುವ ಹೆಮ್ಮೆಯ ವಿಚಾರವನ್ನು ಪ್ರಸ್ತಾಪಿಸಿದ ಶಾಸಕರು, ಗ್ರಾಮೀಣ ಜನಪ್ರತಿನಿಧಿಗಳಿಗೆ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸೂಕ್ತ ಗೌರವ ಒದಗಿಸುವಂತೆ ಸಚಿವರನ್ನು ಕೋರಿದರು.

ಉಡುಪಿ ಜಿಲ್ಲೆಯ ಮಡಾಮಕ್ಕಿ, ಮುದ್ರಾಡಿ, ಸಾಣೂರು, ವಂಡ್ಸೆ ಮತ್ತು ಹಕ್ಲಾಡಿ ಗ್ರಾಮ ಪಂಚಾಯತಿಗಳು ಈ ಪ್ರತಿಷ್ಠಿತ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಇಡೀ ರಾಜ್ಯಕ್ಕೆ ಹಾಗೂ ಕರಾವಳಿ ಭಾಗದ ಜನತೆಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ 03-06-2026 ರಂದು ನವದೆಹಲಿಯ ಪ್ರತಿಷ್ಠಿತ ‘ಭಾರತ್ ಮಂಟಪಂ’ನಲ್ಲಿ ಜರುಗಲಿದ್ದು, ಪ್ರಸ್ತುತ ಈ ಕಾರ್ಯಕ್ರಮಕ್ಕೆ ಕೇವಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಾತ್ರ ತೆರಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಯಾವುದೇ ಒಂದು ಗ್ರಾಮ ಪಂಚಾಯತಿಯ ಅಭಿವೃದ್ಧಿ, ಜನಸೇವಾ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯಲ್ಲಿ ಅಧಿಕಾರಿಗಳ ಜೊತೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರುಗಳ ಪಾತ್ರವೂ ಅತ್ಯಂತ ಮಹತ್ವದ್ದಾಗಿರುತ್ತದೆ. ಅಧ್ಯಕ್ಷರ ದಕ್ಷ ನೇತೃತ್ವ ಮತ್ತು ಜನಪ್ರತಿನಿಧಿಗಳ ಸಮನ್ವಯದಿಂದಲೇ ಇಂತಹ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಶಾಸಕರು ತಮ್ಮ ಮನವಿಯಲ್ಲಿ ವಿವರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆದ್ದರಿಂದ, ನವದೆಹಲಿಯಲ್ಲಿ ನಡೆಯುವ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಿಗೂ ಭಾಗವಹಿಸುವ ಅವಕಾಶ ಕಲ್ಪಿಸುವುದು ಅತ್ಯಂತ ಸಮಂಜಸವಾಗಿದೆ. ಇದರಿಂದ ಗ್ರಾಮೀಣ ಮಟ್ಟದಲ್ಲಿ ಹಗಲಿರುಳು ಶ್ರಮಿಸುವ ಜನಪ್ರತಿನಿಧಿಗಳಿಗೆ ಇನ್ನಷ್ಟು ಉತ್ತೇಜನ ಹಾಗೂ ಪ್ರೇರಣೆ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲೆಯ ಪ್ರಶಸ್ತಿ ಪಡೆದ ಎಲ್ಲಾ 5 ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳಿಗೂ ನವದೆಹಲಿಯಲ್ಲಿ ನಡೆಯುವ ಸದರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತೆರಳಲು ತಕ್ಷಣವೇ ಅಗತ್ಯ ಆಡಳಿತಾತ್ಮಕ ಅನುಮತಿ ಹಾಗೂ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ಕಿಶೋರ್ ಕುಮಾರ್ ಪುತ್ತೂರು ಅವರು ಮನವಿಯಲ್ಲಿ ಬಲವಾಗಿ ಕೋರಿದ್ದಾರೆ.

ಪ್ರಕಟಣೆ
ಕರ್ನಾಟಕ ವಿಧಾನ ಪರಿಷತ್ ಶಾಸಕರ ಕಚೇರಿ
(ಕಿಶೋರ್ ಕುಮಾರ್ ಪುತ್ತೂರು)