ಭರ್ಜರಿ ಸ್ವಾಗತ ಸಿಕ್ಕಿದ ಬೆನ್ನಲ್ಲೇ ಚೀನಾವನ್ನು ಹಾಡಿ ಹೊಗಳಿದ ಟ್ರಂಪ್ -ಕಹಳೆ ನ್ಯೂಸ್

ಬೀಜಿಂಗ್: ಚೀನಾದ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಚೀನಾವನ್ನು ಹಾಡಿ ಹೊಗಳಿದ್ದಾರೆ.
ಬೀಜಿಂಗ್ನ ಗ್ರೇಟ್ ಹಾಲ್ ಆಫ್ ಪೀಪಲ್ನಲ್ಲಿ ನಡೆದ ಐತಿಹಾಸಿಕ ಜಿ-2 (G2) ಶೃಂಗಸಭೆಯ ಆರಂಭಿಕ ಮಾತುಕತೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ( Xi Jinping) ಅವರನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.
ಚೀನಾ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುತ್ತಾ, ನೀವು ಮಾಡಿರುವ ಕೆಲಸಗಳ ಬಗ್ಗೆ ಮತ್ತು ಚೀನಾದ ಮೇಲೆ ನನಗೆ ಅಪಾರ ಗೌರವವಿದೆ ಎಂದು ಹರ್ಷಿಸಿದರು.
ತನ್ನೊಂದಿಗೆ ಬಂದಿರುವ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್, ಆಪಲ್ ಸಿಇಒ ಟಿಮ್ ಕುಕ್ ಮತ್ತು ಎನ್ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ ಅವರಂತಹ ಬಿಲಿಯನೇರ್ ಉದ್ಯಮಿಗಳನ್ನು ಜಿನ್ಪಿಂಗ್ಗೆ ಪರಿಚಯಿಸುತ್ತಾ, ನಾನು ಜಗತ್ತಿನ ಅತ್ಯುತ್ತಮ ಉದ್ಯಮಿಗಳನ್ನು ಇಲ್ಲಿಗೆ ಕರೆತಂದಿದ್ದೇನೆ. ನಿಮಗೆ ಗೌರವ ಸಲ್ಲಿಸಲು ಕೇವಲ ಪ್ರಮುಖ ವ್ಯಕ್ತಿಗಳು ಮಾತ್ರ ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದರು.
ಜಿನ್ಪಿಂಗ್ ಹೇಳಿದ್ದೇನು?
ಟ್ರಂಪ್ ಮೆಚ್ಚುಗೆಗೆ ಪ್ರತಿಯಾಗಿ ಮಾತನಾಡಿದ ಕ್ಸಿ ಜಿನ್ಪಿಂಗ್, ಚೀನಾ ಮತ್ತು ಅಮೆರಿಕ ದೇಶಗಳು ಪರಸ್ಪರ ಪ್ರತಿಸ್ಪರ್ಧಿಗಳಾಗುವ ಬದಲು ಪಾಲುದಾರರಾಗಬೇಕು ಎಂದು ಕರೆ ನೀಡಿದರು.
ವಿಶ್ವವು ಇಂದು ಒಂದು ಹೊಸ ಜಾಗತಿಕ ಅಡ್ಡರಸ್ತೆಯಲ್ಲಿದೆ ಮತ್ತು ಇಡೀ ಜಗತ್ತು ಈ ಮಹತ್ವದ ಸಭೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಚೀನಾ-ಅಮೆರಿಕ ನಡುವಿನ ಸುದೃಢ ಮತ್ತು ಸ್ಥಿರವಾದ ಬಾಂಧವ್ಯವು ಇಡೀ ಜಗತ್ತಿಗೆ ಸಿಗುವ ಒಂದು ದೊಡ್ಡ ವರ ಎಂದು ಬಣ್ಣಿಸಿದರು.
ಉದಯೋನ್ಮುಖ ಶಕ್ತಿಯೊಂದು ಹಳೆಯ ಬಲಿಷ್ಠ ಶಕ್ತಿಯನ್ನು ಮೀರಿಸಲು ಹೊರಟಾಗ ಸಂಘರ್ಷ ಅನಿವಾರ್ಯ ಎಂಬ ಜಾಗತಿಕ ರಾಜತಾಂತ್ರಿಕ ಸಿದ್ಧಾಂತವನ್ನು ಎರಡೂ ದೇಶಗಳು ಮೀರಿ ನಿಲ್ಲಬೇಕಿದೆ. ನಾವು ಪರಸ್ಪರ ಯಶಸ್ಸನ್ನು ಸಾಧಿಸುತ್ತಾ, ಒಟ್ಟಿಗೆ ಅಭಿವೃದ್ಧಿ ಹೊಂದುವ ಹೊಸ ಮಾದರಿಯ ಬಲಿಷ್ಠ ರಾಷ್ಟ್ರಗಳ ಸಂಬಂಧವನ್ನು ಜಗತ್ತಿಗೆ ಪರಿಚಯಿಸಬೇಕು ಎಂದು ಕರೆ ನೀಡಿದರು.
ಟ್ರಂಪ್ ಭೇಟಿ ನೀಡಿದ್ದೇಕೆ?
ಚೀನಾ ತನ್ನ ಮಾರುಕಟ್ಟೆಯನ್ನು ಅಮೆರಿಕದ ಪ್ರಮುಖ ಉದ್ಯಮಗಳಿಗೆ ಮುಕ್ತವಾಗಿ ತೆರೆಯಬೇಕು ಎಂಬುದು ಟ್ರಂಪ್ ಅವರ ಮುಖ್ಯ ಬೇಡಿಕೆಯಾಗಿದೆ. ಅಮೆರಿಕದ ಸೋಯಾಬೀನ್, ಗೋಮಾಂಸ ಮತ್ತು ಬೋಯಿಂಗ್ ವಿಮಾನದ ಬಿಡಿಭಾಗಗಳನ್ನು ಚೀನಾ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವಂತೆ ಮಾಡಿ ವ್ಯಾಪಾರ ಕೊರತೆಯನ್ನು ನೀಗಿಸುವುದು ಟ್ರಂಪ್ ಉದ್ದೇಶವಾಗಿದೆ.
ಭಯ ದೇಶಗಳ ನಡುವೆ ಕಳೆದ ವರ್ಷ ಆರಂಭವಾಗಿದ್ದ ಸುಂಕದ ಸಮರಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದ್ದು, ಈ ಒಪ್ಪಂದವನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯಲಿದೆ.
ಇರಾನ್ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಚೀನಾದ ಸಹಾಯದಿಂದ ಯುದ್ಧಕ್ಕೆ ಕೊನೆ ಹಾಡಿ ಜಾಗತಿಕ ಆರ್ಥಿಕತೆಯನ್ನು ಸ್ಥಿರಗೊಳಿಸುವುದು ಟ್ರಂಪ್ ಅವರ ಮತ್ತೊಂದು ಪ್ರಮುಖ ರಾಜತಾಂತ್ರಿಕ ಕಾರ್ಯಸೂಚಿಯಾಗಿದೆ.








