
ನವದೆಹಲಿ: ಇರಾನ್ ಮತ್ತು ಇಸ್ರೇಲ್ ಅಮೆರಿಕ ರಾಷ್ಟ್ರಗಳ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು ಭಾರತದ ಪೆಟ್ರೋಲಿಯಂ ಸಚಿವಾಲಯ ಒಂದು ಪ್ರಮುಖ ಕ್ರಮ ಕೈಗೊಂಡಿದೆ.
ದೇಶದ ಆಯ್ದ ಕೈಗಾರಿಕಾ ಕ್ಷೇತ್ರಗಳಿಗೆ ಈವರೆಗೆ ನೀಡಲಾಗುತ್ತಿದ್ದ ಎಲ್‌ಪಿಜಿ ಹಂಚಿಕೆಯನ್ನು ಈಗ ಶೇಕಡಾ 70ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.
ಈ ಯುದ್ಧದ ಅಡ್ಡಪರಿಣಾಮದಿಂದಾಗಿ ಉದ್ಯಮಗಳು ಸ್ಥಗಿತಗೊಳ್ಳಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರಗಳಿಗೆ ಈ ಕುರಿತು ಪತ್ರ ಬರೆಯಲಾಗಿದೆ.ವಿಶೇಷವಾಗಿ ಔಷಧ ತಯಾರಿಕೆ, ಆಹಾರ ಸಂಸ್ಕರಣೆ, ಉಕ್ಕು ಮತ್ತು ಕೃಷಿ ಸಂಬಂಧಿತ ಘಟಕಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಲಾಗಿದೆ. ಗೃಹ ಬಳಕೆಯ ಅನಿಲ ಪೂರೈಕೆಗೆ ಧಕ್ಕೆಯಾಗದಂತೆ ಈ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರದ ಗುರಿಯಾಗಿದೆ.
ಪೆಟ್ರೋಲಿಯಂ ಸಚಿವಾಲಯದ ಕಾರ್ಯದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಎಲ್‌ಪಿಜಿಗೆ ಪರ್ಯಾಯವಾಗಿ ನೈಸರ್ಗಿಕ ಅನಿಲವನ್ನು (PNG) ಬಳಸಲು ಸಾಧ್ಯವಿಲ್ಲದ ವಿಶಿಷ್ಟ ಕೈಗಾರಿಕೆಗಳಿಗೆ ಮಾತ್ರ ಈ ಹೆಚ್ಚುವರಿ ಕೋಟಾದಲ್ಲಿ ಮೊದಲ ಆದ್ಯತೆ ಸಿಗಲಿದೆ. ಕೈಗಾರಿಕೆಗಳು ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮತ್ತು ಆರ್ಥಿಕ ಚಕ್ರವು ಸುಗಮವಾಗಿ ಸಾಗಲು ಈ 20% ಹೆಚ್ಚುವರಿ ಹಂಚಿಕೆಯು
ಬೆಂಬಲ ನೀಡಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.









