ಆರ್ಯಾಪು: ಕೊಲ್ಯ ಕಾಲನಿಯಲ್ಲಿ ೨ ಕೋಟಿ ರೂ ಅನುದಾನದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ ; ಚುನಾವಣೆಯ ವೇಳೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ: ಶಾಸಕ ಅಶೋಕ್ ರೈ -ಕಹಳೆ ನ್ಯೂಸ್

ಪುತ್ತೂರು: ಆರ್ಯಾಪು ಗ್ರಾಮದ ಕೊಲ್ಯ ಕಾಲನಿಗೆ ಕಳೆದ ಚುನಾವಣೆಯಲ್ಲಿ ಮತ ಕೇಳಲು ಬಂದಾಗ ಇಲ್ಲಿನ ನಿವಾಸಿಗಳು ತಡೆಗೋಡೆಯ ಬೇಡಿಕೆಯನ್ನು ಮುಂದಿಟ್ಟಿದ್ದರು. ತಡೆಗೋಡೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿರಲಿಲ್ಲ, ಇಲ್ಲಿಗೆ ತಡೆಗೋಡೆ ಅಗತ್ಯವಿದೆ ಎಂದು ಹೇಳಿದ್ದೆ ಆದರೆ ಶಾಸಕನಾದ ಬಳಿಕ ಈ ಭಾಗದ ಜನರ ಬೇಡಿಕೆಯನ್ನು ಮರೆಯಲಿಲ್ಲ ಇಲ್ಲಿ ತಡೆಗೋಡೆ ನಿರ್ಮಾಣಕ್ಕೆ ೨ ಕೋಟಿ ಅನುದಾನ ಮಂಜೂರು ಮಾಡುವ ಮೂಲಕ ಜನರ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೊಲ್ಯ ಕಾಲನಿಯಲ್ಲಿ ತಡೆಗೋಡೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಈ ಹಿಂದೆ ಇಲ್ಲಿ ಶಾಸಕರೋರ್ವರು ತಡೆಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಿ ವೋಟು ಪಡೆದು ಹೋಗಿದ್ದರು, ಜನರು ಇವರ ಮಾತನ್ನು ನಂಬಿ ಅವರಿಗೇ ವೋಟು ಹಾಕಿದ್ದರು ಆದರೆ ಕೇವಲ ತೆಂಗಿನ ಕಾಯಿ ಒಡೆದು ಹೋಗಿದ್ದು ಮಾತ್ರ ಇಲ್ಲಿಗೆ ಶಾಶ್ವತ ತಡೆಗೋಡೆ ಮಾಡಿದ್ದು ನಾವು ಕಾಂಗ್ರೆಸ್ ಸರಕಾರ ಎಂಬುದು ಜನ ಅರಿತುಕೊಂಡಿದ್ದಾರೆ. ಕಾಂಗ್ರೆಸ್ ಎಂದೂ ಬಡವರಿಗೆ ಅನ್ಯಾಯ ಮಾಡುವುದಿಲ್ಲ, ಕೊಟ್ಟ ಮಾತನ್ನು ಎಂದೂ ಉಳಿಸಿಕೊಳ್ಲುತ್ತದೆ ಎಂಬುದಕ್ಕೆ ಇದುವೇ ಸಾಕ್ಷಿಯಾಗಿದೆ ಎಂದು ಶಾಸಕರು ಹೇಳಿದರು.
ಅಪಾಯದಲ್ಲಿ ದಿನ ದೂಡುತ್ತಿದ್ದರು
ಪ್ರತೀ ಮಳೆಗಾಲದಲ್ಲಿ ಇಲ್ಲಿನ ಮನೆಯವರು ಭಯದಲ್ಲೇ ದಿನ ದೂಡುತ್ತಿದ್ದರು. ಧರೆ ಯಾವಾಗ ಕುಸಿಯುತ್ತದೆ ಎಂಬ ಭಯ ಪ್ರತೀ ಮನೆಯವರಲ್ಲಿತ್ತು. ಸಣ್ಣ ಮನೆಯನ್ನು ಕಟ್ಟಿಕೊಂಡು , ಮಕ್ಕಳೊಂದಿಗೆ ವಾಸ ಮಾಡುತ್ತಿರುವ ಬಡ ಕುಟುಂಬಗಳಿಗೆ ಇಂದು ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದೇನೆ. ಬಡವರ ಪರ ಕೆಲಸ ಮಾಡುವವರು ಇಂದು ಕಡಿಮೆಯಾಗಿದ್ದಾರೆ. ಉಳ್ಳವರು ಎಲ್ಲವನ್ನೂ ಮಾಡಿಕೊಳ್ಳುತ್ತಾರೆ ಆದರೆ ಅರಿವಿನ ಕೊರತೆ ಇರುವ ಬಡವರು ಮನವಿ ಮಾಡುತ್ತಲೇ ಇದ್ದು ಅವರು ಕೊಡುವ ಭರವಸೆಯನ್ನು ನಂಬಿಕೊಂಡಿರುತ್ತಾರೆ. ಬಡವರಿಗೆ ವಂಚನೆ ಮಾಡುವ ಮನಸ್ಸು ಯಾರಿಗೂ ಇರಬಾರದು. ಇಂದು ಇಲ್ಲಿನ ಎಲ್ಲಾ ಮನೆಯವರಿಗೂ ಹಬ್ಬದ ವಾತಾವರಣ ಸೃಷ್ಟಿ ಮಾಡುವ ಮೂಲಕ ಸಂತೋಷವನ್ನು ಹಂಚಿಕೊಂಡಿದ್ದೇನೆ ಎಂದು ಶಾಸಕರು ಹೇಳಿದರು.
ಮಳೆಗಾಲಕ್ಕೆ ಮುನ್ನ ಕಾಮಗಾರಿ ನಡೆಯಲಿದೆ
ಮುಂದಿನ ಮಳೆಗಾಲಕ್ಕೆ ಮುನ್ನ ಕಾಮಗಾರಿ ನಡೆಸುವಂತೆ ಸೂಚನೆಯನ್ನು ನೀಡಿದ್ದೇನೆ. ಕಳೆದ ೧೭ ವರ್ಷಗಳಿಂದ ಇಲ್ಲಿನ ಬಡ ಕುಟುಂಬಗಳು ನಿತ್ಯ ಕಣ್ಣೀರು ಹಾಕುತ್ತಿದ್ದರು ಇನ್ನು ಯಾರೂ ಆತಂಕದಿಂದ ಮಳೆಗಾಲ ಕಳೆಯುವುದು ಬೇಡ ಎಂದ ಶಾಸಕರು ಅಭಿವೃದ್ದಿ ಮಾಡಿದವರನ್ನು ಜನ ಮರೆಯಬಾರದು ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡುವ ಮೂಲಕ ಇನ್ನಷ್ಟು ಬಡವರ ಸೇವೆ ಮಾಡಲು ಶಕ್ತಿ ತುಂಬ ಬೇಕು ಎಂದು ಮನವಿ ಮಾಡಿದರು.
ಅಶೋಕ್ ರೈ ಶಾಸಕರಾಗಿದ್ದು ಬಡವರ ಭಾಗ್ಯ: ಕಾವು ಹೇಮನಾಥ ಶೆಟ್ಟಿ
ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಅಶೋಕ್ ರೈ ಶಾಕರಾಗಿದ್ದು ಬಡವರ ಪಾಲಿನ ಭಾಗ್ಯವಾಗಿದೆ. ಈ ಹಿಂದೆ ಎಷ್ಟೋ ಮಂದಿ ಇಲ್ಲಿ ಶಾಸಕರಾಗಿದ್ದಾರೆ, ಸಂಸದರಾಗಿದ್ದಾರೆ, ಎಂಎಲ್ಸಿಗಳಾಗಿದ್ದಾರೆ ಯರೂ ಕೊಲ್ಯದ ಕಾಲನಿಯ ಜನರ ಕಣ್ಣೀರೊರೆಸುವ ಕೆಲಸ ಮಾಡಿಲ್ಲ. ಇಲ್ಲಿನ ಜನರ ಸಂಕಷ್ಟ ಅರಿತ ಶಾಸಕರು ೨ ಕೋಟಿ ಅನುದಾನ ಮಂಜೂರು ಮಾಡಿಸುವ ಮೂಲಕ ಬೇಡಿಕೆ ಈಡೇರಿಸಿದ್ದಾರೆ . ಅಶೋಕ್ ರೈ ಅವರಿಗೆ ನಾವೆಲ್ಲರೂ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಅಭಿವೃದ್ದಿಯಲ್ಲಿ ರಾಜಕೀಯ ಮಾಡದ ಇವರ ಸಿದ್ದಾಂತಕ್ಕೆ ಬಿಜೆಪಿಯವರೂ ಸೋತಿದ್ದಾರೆ. ಶಾಶಕರೆದುರು ಪುತ್ತೂರು ಬಿಜೆಪಿ ಮಣ್ಣು ಪಾಲಾಗಲಿದೆ. ರಾಜಕೀಯ ರಹಿತ ಕೆಲಸ ಮಾಡುವ ಶಾಸಕರನ್ನು ಕಂಡ ಪುತತೂರು ಧನ್ಯವಾಗಿದೆ. ಕೊಲ್ಯದ ಜನರ ಪಾಲಿಗೆ ಶಾಸಕರು ಆಶಾಕಿರಣವಾಗಿದ್ದಾರೆ. ಶಾಸಕರ ಅಭಿವೃದ್ದಿ ಕೆಲಸವನ್ನು ಕಂಡು ಬೆಚ್ಚಿ ಬಿದ್ದ ಬಿಜೆಪಿ ಬಾಯಿಗೆ ಬಂದಂತೆ ಮಾತನಾಡತೊಡಗಿದೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಪಕ್ಷಾತೀತವಾಗಿ ಅಶೋಕ್ ರೈಗೆ ಬೆಂಬಲ ನೀಡಲಿದೆ ಎಂದು ಹೇಳಿದರು.
ಕಂದಾಯ ಇಲಾಖೆಯ ಅಮಾನವೀಯತೆ: ಆಲಿ
ದ ಕ ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದಾಲಿ ಮಾತನಾಡಿ ಈ ಹಿಂದೆ ನಿವೇಶನ ಕೇಳಿದ ಬಡ ಕುಟುಂಬಗಳಿಗೆ ಬೆಟ್ಟ, ಗುಡ್ಡದಲ್ಲಿ ಜಾಗ ನೀಡುವ ಮೂಲಕ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಅಮಾನವೀಯತೆ ತೋರಿದ್ದರ ಪರಿಣಾಮ ಇಂದು ಕೊಲ್ಯದ ಬೆಟ್ಟದಲ್ಲಿ ಮನೆ ಮಾಡಬೇಕಾದ ಸ್ಥಿತಿ ಬಡವರಿಗೆ ಬಂದಿದೆ. ಸಾಕಷ್ಟು ಸರಕಾರಿ ಜಾಗವಿದ್ದರೂ ಅಲ್ಲಿ ಇವರಿಗೆ ನಿವೇಶನ ನೀಡಿರಲಿಲ್ಲ ಇದು ಅಮಾನವೀಯತೆಯಲ್ಲವೇ ಎಂದು ಪ್ರಶ್ನಿಸಿದ ಆಲಿಯವರು ಎಷ್ಟೋ ವರ್ಷಗಳ ಬಳಿಕ ಪುತ್ತೂರು ಶಾಸಕರು ಬಡವರಿಗೆ ನಿವೇಶನ ನೀಡಲು ೩೮೦ ಎಕ್ರೆ ಜಾಗ ಗುರುತಿಸಿದ್‌ದು ಆ ನಿವೇಶನವನ್ನು ಸುಸಜ್ಜಿತ ನಿವೇಶನವನ್ನಾಗಿ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ.
ಶಾಸಕರಿಗಲ್ಲದೆ ಇಲ್ಲಿಗೆ ಎರಡು ಕೋಟಿ ಅನುದಾನ ತರಲು ಯಾರಿದಂಲೂ ಸಾಧ್ಯವಾಗುತ್ತಿರಲಿಲ್ಲ. ಇಲ್ಲಿನ ಮಾಜಿ ಸಂಸದ ನಳಿನ್ ಇಲ್ಲಿಗೆ ಅನುದಾನ ನೀಡಿಲ್ಲ, ಸಂಜೀವ ಮಠಂದೂರು ನೀಡಿಲ್ಲ.ಚುನಾವಣೆಯ ಸಮಯದಲ್ಲಿ ಜನರ ಭಾವನೆಯನ್ನು ಕೆರಳಿಸಿ ಮತ ಪಡೆಯುವ ಇವರಿಗೆ ಜನರ ನೋವಿಗೆ ಸ್ಪಂದಿಸುವ ಆಸಕ್ತಿ ಇರಲಿಲ್ಲ ಎಂದು ಆಲಿ ದೂರಿದರು.
ಮಠಂದೂರು ಶಾಸಕರಾಗಿದ್ದ ವೇಳೆ ಅನೇಕ ಮಂದಿ ಬಂಡವಾಳ ಶಾಹಿಗಳಿಗೆ, ಶ್ರೀಮಂತ ವ್ಯಕ್ತಿಗಳ ಮನೆಗೆ ಹೋಗುವ ರಸ್ತೆ ಬದಿ, ತೋಟದ ಬದಿಗೆ ತಡೆಗೋಡೆ ಮಾಡಿದ ಬಗ್ಗೆ ನನ್ನಲ್ಲಿ ದಾಖಲೆ ಇದೆ ಅವರಿಗೆ ಕೊಲ್ಯದ ಸಮಸ್ಯೆ ಕಣ್ಣಿಗೆ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರಕಾರ ಬಡವರ ಪರವಾಗಿದೆ. ಗ್ಯಾರಂಟಿ ಯೋಜನೆಯಿಂದ ಬಡವರ ಬದುಕು ಹಸನಾಗಿದೆ , ಕಾಂಗ್ರೆಸ್ ಯೋಜನೆಯನ್ನು ಜನ ಮರೆಯಬಾರದು, ಮುಂದಿನ ಗ್ರಾಪಂ, ತಾಪಂ , ಜಿಪಂ< ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವ ಮೂಲಕ ಅಶೋಕ್ ರೈ ಅವರ ಕೈ ಬಲಪಡಿಸುವ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿಯವರಲ್ಲಿ ಹೇಳಿ ಸಾಕಾಗಿ ಹೋಗಿತ್ತು ಕೊನೆಗೆ ಬಿಜೆಪಿ ಬಿಟ್ಟು ಹೊರಬಂದೆ: ಪೂರ್ಣಿಮಾ
ನಾನು ಈ ಹಿಂದೆ ಬಿಜೆಪಿಯಲ್ಲಿದ್ದೆ, ಕೊಲ್ಯ ಕಾಲನಿಗೆ ತಡೆಗೋಡೆ ಮಾಡಿ ಎಂದು ಬಿಜೆಪಿ ಶಾಸಕರಲ್ಲಿ ಮನವಿ ಮಾಡಿದ್ದೆ ಆದರೆ ಅವರು ಕ್ಯಾರೇ ಮಾಡಿರಲಿಲ್ಲ. ಹೇಳಿ ಹೇಳಿ ಸಾಕಾಗಿ ಹೋಗಿತ್ತು ಕೊನೆಗೆ ನಾನೇ ಬಿಜೆಪಿಯನ್ನು ಬಿಟ್ಟು ಹೊರಬಂದೆ ಎಂದು ಆರ್ಯಾಪು ಗ್ರಾಪಂ ಸದಸ್ಯೆ ಪೂರ್ಣಿ ಮಹೇಳಿದರು. ಬಿಜಪಿಯವರಿಂದ ಜನ್ಮದಲ್ಲಿ ಇಲ್ಲಿ ತಡೆಗೋಡೆ ಮಾಡ್ಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ ಅಶೋಕ್ ರೈ ಮಾಡಿ ಕೊಡುತ್ತಾರೆ ಎಂಬ ನಂಬಿಕೆ ಇತ್ತು ಆದೇ ರೀತಿ ಆಗಿದೆ ಎಂದ ಅವರು ನಾನು ಬಿಜೆಪಿ ಬಿಟ್ಟು ಹೊರ ಬಂದ ಕಾರಣ ಇಲ್ಲಿನ ಜನರಿಗೆ ಮುಖ ತೋರಿಸಲು ಸಾಧ್ಯವಾಗಿದೆ. ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿಗೆ ಕೊಳವೆ ಬಾವಿ ತೆಗೆಯುವಾಗಲೂ ಬಿಜೆಪಿಯವರು ಅಡ್ಡಗಾಲಿಟ್ಟಿದ್ದರು ಕೊನೆ ಗೆ ಶಾಸಕ ಅಶೋಕ್ ರೈಗಳು ಪೊಲೀಸ್ ಇಟ್ಟು ಬೋರ‍್ವೆಲ್ ತೆಗೆಸಿದ್ದಾರೆ ಅಂಥಹ ಮನಸ್ಸಿತಿಯವರು ಬಿಜೆಪಿಯವರು ಎಂದು ದೂರಿದರು. ಯೋಗೀಶ್ ಸಾಮಾನಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಕೊಲ್ಯ ನಿವಾಸಿಗಳ ಸಮಸ್ಯೆ ಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಪಂ ಸದಸ್ಯ ಪವಿತ್ರಾ ರೈ, ಪಕ್ಷದ ಮುಖಂಡರಾದ ಸಲಾಂ ಸಂಪ್ಯ, ಹಾರಿಸ್ ಸಂಠ್ಯಾರ್, ಕೇಶವ ಸುವರ್ಣ, ಅಣ್ಣಿ ಕಲ್ಲರ್ಪೆ ಸ್ಥಳೀಯರಾದ ಪದ್ಮನಾಭ ಉಪಸ್ಥಿತರಿದ್ದರು.
ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ಸಂಟ್ಯಾರ್ ಸ್ವಾಗತಿಸಿ, ಗ್ರಾಪಂ ಸದಸ್ಯ ನೇಮಾಕ್ಷ ಸುವರ್ಣ ಮಗಿರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.














