
ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಸಹಕಾರ ಕ್ಷೇತ್ರದ ದೂರಗಾಮಿ ಅಭಿವೃದ್ಧಿಗೆ ಪೂರಕವಾಗಿದೆ. ಬಜೆಟ್ ನಲ್ಲಿ ಪ್ರಾಥಮಿಕ ಸಹಕಾರಿ ಸಂಘಗಳಿಗೆ ಆದಾಯ ತೆರಿಗೆ ಕಡಿತವನ್ನು ವಿಸ್ತರಿಸಿರುವುದು ಉತ್ತಮ ನಡೆ ಎಂದು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಎಸ್. ಆರ್. ಹರೀಶ್ ಆಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.
ಇದುವರೆಗೆ ತೆರಿಗೆ ಕಡಿತದ, ಪ್ರಯೋಜನವು ಹಾಲು ಉತ್ಪಾದನೆ, ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ ಹಾಗೂ ಮಾರುಕಟ್ಟೆ ಪೂರೈಸುವಲ್ಲಿ ತೊಡಗಿರುವ ಸಹಕಾರಿ ಸಂಸ್ಥೆಗಳಿಗೆ ಅನ್ವಯಿಸುತ್ತಿದ್ದವು. ಈ ಬಾರಿ ಅವುಗಳ ಸದಸ್ಯರು ಬೆಳೆಸಿದ ಅಥವಾ ಬೆಳೆದ ಜಾನುವಾರು ಮೇವು ಮತ್ತು ಹತ್ತಿ ಬೀಜಗಳನ್ನು ಪೂರೈಸುವ ಪ್ರಾಥಮಿಕ ಸಹಕಾರಿ ಸಂಸ್ಥೆಗಳನ್ನು ಸಹ ಸೇರಿಸಿ ತೆರಿಗೆ ಕಡಿತದ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಾಥಮಿಕ ಕೃಷಿ ಸಹಕಾರಿ ಸಂಸ್ಥೆಗಳಿಗೂ ಹೆಚ್ಚುವರಿ ಬೆಂಬಲ ನೀಡಲು ಬಜೆಟ್ ನಲ್ಲಿ ಪ್ರಸ್ತಾಪವನ್ನು ಮಾಡಲಾಗಿದೆ.
ಆಡಳಿತವು ಹೊಸ ರೀತಿಯ ತೆರಿಗೆ ಸುಧಾರಣೆಗೆ ಪ್ರಮುಖ ಪ್ರಸ್ತಾಪಿಸಲಾಗಿದ್ದು ಒಂದು ಸಹಕಾರಿ ಸಂಘ ಮತ್ತೊಂದು ಸಹಕಾರಿ ಸಂಘದಿಂದ ಪಡೆದ ಲಾಭಾಂಶದ ಆದಾಯವನ್ನು ತೆರಿಗೆ ಕಡಿತವಾಗಿ ಪರಿಗಣಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಹಕಾರ ಸಚಿವಾಲಯದ ಒಟ್ಟು ವೆಚ್ಚವನ್ನು 2026-27ರಲ್ಲಿ 1,744.74 ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇದು 2025-26ರಲ್ಲಿ 1,186.29 ಕೋಟಿ ರೂ.ಗಳಷ್ಟಿತ್ತು.
ಒಟ್ಟು 1,744.74 ಕೋಟಿ ರೂ.ಗಳಲ್ಲಿ, 47.77 ಕೋಟಿ ರೂ.ಗಳನ್ನು ಕೇಂದ್ರ ಸಹಕಾರ ಸಚಿವಾಲಯದ ಸ್ಥಾಪನಾ ವೆಚ್ಚಕ್ಕಾಗಿ ಮೀಸಲಿಡಲಾಗಿದೆ.
ಜೊತೆಗೆ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ (ಎನ್‌ಸಿಡಿಸಿ) ವಾರ್ಷಿಕ 500 ಕೋಟಿ ರೂ.ಗಳ ಸಹಾಯಧನ ಘೋಷಣೆ ಮಾಡಲಾಗಿದ್ದು, ಇದನ್ನು ಸಹಕಾರಿ ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಸಹಕಾರಿ ಸಂಸ್ಥೆಗಳನ್ನು ಬಲಪಡಿಸಲು ಮೀಸಲೀಡಲಾಗಿದೆ.
ಒಟ್ಟಾರೆಯಾಗಿ, ಈ ಬಜೆಟ್ ಸಹಕಾರ ಕ್ಷೇತ್ರದಲ್ಲಿ ತೆರಿಗೆ ಹೊರೆಗಳನ್ನು ಸಡಿಲಿಸುವ, ಸದಸ್ಯ ಕೇಂದ್ರಿತ ಹೆಚ್ಚುವರಿ ವಿತರಣೆಯನ್ನು ಉತ್ತೇಜಿಸುವ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಸಮಗ್ರ ಬೆಳವಣಿಗೆಯ ಪ್ರಮುಖ ಚಾಲಕರಾಗಿ ಸಹಕಾರಿಗಳನ್ನು ಬೆಂಬಲಿಸುವ ಮೂಲಕ ಸಹಕಾರಿ ವಲಯವನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದೆ.
ಯುವಶಕ್ತಿ, ಮಹಿಳಾ ಸಬಲೀಕರಣ, ರೈತರ ಆದಾಯ ವೃದ್ಧಿ, ಉದ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನಾಧಾರಿತ ಆರ್ಥಿಕತೆಯತ್ತ ಈ ಬಜೆಟ್ ಸ್ಪಷ್ಟ ಹಾಗೂ ದೃಢ ದೃಷ್ಟಿಕೋನವನ್ನು ಹೊಂದಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














