ಶೆಟ್ರಕಟ್ಟೆ ತಿರುವಿನಲ್ಲಿ ಸರ್ಕಾರಿ ಬಸ್ -ಟಿಪ್ಪರ್ ಅಪಘಾತ: ಕಾಲೇಜು ವಿದ್ಯಾರ್ಥಿಗಳು ಗಂಭೀರ- ಕಹಳೆ ನ್ಯೂಸ್

ಕುಂದಾಪುರ: ಕುಂದಾಪುರದಿಂದ ಸಿದ್ದಾಪುರ ಕಡೆಗೆ ತೆರಳುತ್ತಿದ್ದ ಸರಕಾರಿ ಬಸ್ ಗೆ ನೇರಳಕಟ್ಟೆಯಿಂದ ಮಣ್ಣು ತುಂಬಿಸಿಕೊಂಡು ತಲ್ಲೂರಿನತ್ತ ಬರುತ್ತಿದ್ದ ಟಿಪ್ಪರ್ ಢಿಕ್ಕಿಯಾಗಿ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬಸ್ ನ ಬಲ ಬದಿ ಸಂಪೂರ್ಣ ಜಖಂ ಗೊಂಡಿದ್ದು, ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಗಂಭೀರ ಗಾಯಗಳಾಗಿವೆ. ಸಂಜೆ ಅಪಘಾತ ನಡೆದ ಕಾರಣ ಬಸ್ ನಲ್ಲಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಗಂಭೀರ ವಾಗಿ ಗಾಯಗೊಂಡಿರುವ ಮೂವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಭೇಟಿ ನೀಡಿ ವಿಚಾರಿಸಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳಿಸುವಂತಿದೆ. ಟಿಪ್ಪರ್ ಮುಂಭಾಗವು ಜಖಂಗೊಂಡಿದ್ದು ಅಪಘಾತದ ತೀವ್ರತೆ ಸಾರಿ ಹೇಳುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳ ಆರೈಕೆಗೆ ನೇರವಾದರು. ಬಸ್ ನಲ್ಲಿ ದ್ದ ವಿದ್ಯಾರ್ಥಿಗಳು ಸೇರಿ ಅನೇಕರು ಇನ್ನೂ ಆತಂಕದಿಂದ ಹೊರ ಬಂದಿಲ್ಲ. ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.













