
ವಾರಾಣಸಿ (ಉತ್ತರ ಪ್ರದೇಶ): ಭಾರತದ ಮೊದಲ ಸ್ಥಳೀಯ ಹೈಡ್ರೋಜನ್ ಇಂಧನ ಕೋಶ ಹಡಗನ್ನು ಕೇಂದ್ರ ಬಂದರು ಸಚಿವ ಸರ್ಬಾನಂದ ಸೋನವಾಲ್ ಅವರು ವಾರಾಣಸಿಯ ನಮೋ ಘಾಟ್‌ನಲ್ಲಿ ಗುರುವಾರ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಇದು ಕೇವಲ ತಾಂತ್ರಿಕ ಪ್ರಗತಿಯಲ್ಲ.
ಹಸಿರು ಇಂಧನ ಮತ್ತು ಸ್ವದೇಶಿ ಪರಿಹಾರಗಳತ್ತ ನಮ್ಮ ವಿಶ್ವಾಸದ ಹೆಜ್ಜೆ ಇದಾಗಿದೆ. ಹೈಡ್ರೋಜನ್ ಚಾಲಿತ ಹಡಗುಗಳನ್ನು ನಿರ್ವಹಿಸುವ ಚೀನಾ, ನಾರ್ವೆ, ನೆದರ್ಲ್ಯಾಂಡ್ಸ್, ಜಪಾನ್‌ನಂತಹ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಿದ್ದು ರಾಷ್ಟ್ರೀಯ ಹೆಮ್ಮೆಯ ವಿಷಯ ಎಂದರು.
ನಮ್ಮ ತಾಂತ್ರಿಕ ಸಾಮರ್ಥ್ಯಗಳು ಭವಿಷ್ಯಕ್ಕೆ ಸಿದ್ಧವಾಗಿವೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಿಂದಾಗಿ ಇದು ಸಾಧ್ಯವಾಗಿದೆ ಎಂದರು.
ಉತ್ತರ ಪ್ರದೇಶದ ಸಾರಿಗೆ ರಾಜ್ಯ ಸಚಿವ ದಯಾಶಂಕರ್ ಸಿಂಗ್ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.









