ಶ್ರೀ ರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ : ಉಚಿತ ಕನ್ನಡಕ ವಿತರಣೆ -ಕಹಳೆ ನ್ಯೂಸ್

ಸೆಪ್ಟೆಂಬರ್ 4 ರಂದು ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ವಿಂಶತಿ ಸಂಭ್ರಮಾಚರಣೆಯ ಪ್ರಯುಕ್ತ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಿತು. ಅತಿಥಿಗಳು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಿದರು. ಮುಖ್ಯ ಅತಿಥಿಗಳಾದ ಡಾ.ಕೃಷ್ಣಪ್ರಸಾದ್ ಕೂಡ್ಲು, ಪ್ರಸಾದ್ ನೇತ್ರಾಲಯ ಮಂಗಳೂರು ಹಾಗೂ ಉಡುಪಿ ಇವರು ಮಾತನಾಡಿ ದೃಷ್ಟಿಯ ಮಹತ್ವನ್ನು ತಿಳಿಸಿದರು, ಪ್ರಸಾದ್ ನೇತ್ರಾಲಯದ ವತಿಯಿಂದ ಶ್ರಿ ರಾಮ ವಿದ್ಯಾಕೇಂದ್ರದ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ 154 ಕನ್ನಡಕಗಳನ್ನು ಉಚಿತವಾಗಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ವಹಿಸಿದ್ದರು. ವೇದಿಕೆಯಲ್ಲಿ ಶ್ರೀರಾಮ
ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ, ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀವಸಂತ ಬಲ್ಲಾಳ್ ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ಚೈತನ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು.














