ಭಾರತದ ಮಾವು ತಿರಸ್ಕರಿಸಿ 15 ವಿಮಾನಗಳಲ್ಲಿ ರಫ್ತಾದ ಮಾವಿನಹಣ್ಣನ್ನು ತಿಪ್ಪೆಗೆಸೆದ ಅಮೆರಿಕ..!-ಕಹಳೆ ನ್ಯೂಸ್

ಹಣ್ಣನ್ನು ವಿಮಾನದ ಮೂಲಕ ರಫ್ತು ಮಾಡಲಾಗಿದ್ದು, ಅಮೆರಿಕಕ್ಕೆ ಬಂದ ನಂತರ ಅದನ್ನು ತಿರಸ್ಕರಿಸಲಾಗಿದೆ. ಮೇ 8 ಮತ್ತು 9 ರಂದು ಮುಂಬೈನಿಂದ ಮಾವಿನ ಹಣ್ಣುಗಳನ್ನು ರಫ್ತು ಮಾಡಲಾಗಿತ್ತು. ಆದರೆ ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಅಟ್ಲಾಂಟಾ ಸೇರಿದಂತೆ ವಿವಿಧೆಡೆ ತಲುಪಿದ ಮಾವಿನ ಹಣ್ಣುಗಳನ್ನು ಅಮೆರಿಕ ವಿಮಾನ ನಿಲ್ದಾಣಗಳಲ್ಲೇ ನಿರಾಕರಿಸಿದೆ.
ವರದಿಗಳ ಪ್ರಕಾರ ಮಾವಿನ ಹಣ್ಣುಗಳಿಗೆ ಮುಂಬೈನಲ್ಲೇ ವಿಕಿರಣ ಚಿಕಿತ್ಸೆ ನೀಡಲಾಗಿತ್ತು. ವಿಕಿರಣ ಚಿಕಿತ್ಸೆ ರಫ್ತಾಗುವ ಮಾವಿನ ಹಣ್ಣುಗಳಿಗೆ ಕಡ್ಡಾಯವಾಗಿದೆ. ಕೀಟಗಳನ್ನು ತೊಡೆದುಹಾಕಲು ಮತ್ತು ಹಣ್ಣಿನ ಜೀವಿತಾವಧಿಯನ್ನು ಹೆಚ್ಚಿಸಲು ಅವುಗಳನ್ನು ನಿಯಂತ್ರಿತ ಪ್ರಮಾಣದಲ್ಲಿ ವಿಕಿರಣಕ್ಕೆ ಒಡ್ಡಲಾಗುತ್ತದೆ. ಆದರೆ ಇದರ ದಾಖಲೆಯ ಕೊರತೆಯುಂಟಾದ ಹಿನ್ನೆಲೆ ರಫ್ತು ಮಾಡಿದ ಮಾವಿನ ಹಣ್ಣುಗಳನ್ನು ನಿರಾಕರಿಸಲಾಗಿದೆ.
ರಫ್ತುದಾರರಿಗೆ ಸರಕುಗಳನ್ನು ನಾಶಮಾಡಲು ಅಥವಾ ಭಾರತಕ್ಕೆ ವಾಪಸ್ ಕಳುಹಿಸಲು ಹೇಳಲಾಗಿದೆ. ಆದರೆ ಮಾವಿನಹಣ್ಣುಗಳು ಹಾಳಾಗುವ ಸ್ವಭಾವ ಮತ್ತು ಭಾರತಕ್ಕೆ ಮರಳಿ ಸಾಗಿಸಲು ಹೆಚ್ಚಿನ ವೆಚ್ಚದ ಕಾರಣದಿಂದಾಗಿ ಅವುಗಳನ್ನು ಅಲ್ಲಿಯೇ ನಾಶಮಾಡಲು ರಫ್ತುದಾರರು ನಿರ್ಧರಿಸಿದರು ಎನ್ನಲಾಗಿದೆ.
ಈ ಬಗ್ಗೆ ಇಬ್ಬರು ರಫ್ತುದಾರರು ಕಳವಳ ವ್ಯಕ್ತಪಡಿಸಿದ್ದಾರೆ. ವಿಕಿರಣ ಪ್ರಕ್ರಿಯೆಯನ್ನು ಅಮೆರಿಕದ ಕೃಷಿ ಇಲಾಖೆಯ (ಯುಎಸ್‌ಡಿಎ) ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ನವಿ ಮುಂಬೈನಲ್ಲಿರುವ ಸೌಲಭ್ಯದಲ್ಲಿ ಮಾಡಲಾಗುತ್ತದೆ. ಈ ಅಧಿಕಾರಿಯು ಅಮೆರಿಕಕ್ಕೆ ಸಾಗಿಸಲಾಗುವ ಮಾವಿನ ಹಣ್ಣುಗಳಿಗೆ ಕಡ್ಡಾಯ ದಾಖಲೆಯಾದ ಪಿಪಿಕ್ಯೂ203 ಫಾರ್ಮ್ ಅನ್ನು ಪ್ರಮಾಣೀಕರಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ ಅವರದೇ ವಿಕಿರಣ ಸೌಲಭ್ಯದಲ್ಲಿ ಮಾಡಿದ ತಪ್ಪುಗಳಿಂದಾಗಿ ನಮಗೆ ಈ ಶಿಕ್ಷೆ ವಿಧಿಸಲಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.









