Saturday, April 25, 2026
ಅಂತಾರಾಷ್ಟ್ರೀಯಜಮ್ಮು ಮತ್ತು ಕಾಶ್ಮೀರದೆಹಲಿಸುದ್ದಿ

ಪಾಕಿಸ್ತಾನದಿಂದ ನೇರ ಮತ್ತು ಪರೋಕ್ಷ ಆಮದುಗಳ ನಿಷೇಧ : ತಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಅಧಿಸೂಚನೆ-ಕಹಳೆ ನ್ಯೂಸ್

ನವದೆಹಲಿ: ಪಹಲ್ಗಾಮ್ ದಾಳಿ ನಂತರ ಪಾಕಿಸ್ತಾನ ವಿರುದ್ಧ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಂಡಿರುವ ಭಾರತ ಸರ್ಕಾರ, ಪಾಕಿಸ್ತಾನದಿಂದ ಎಲ್ಲಾ ಸರಕುಗಳ ನೇರ ಅಥವಾ ಪರೋಕ್ಷ ಆಮದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ.

ವಾಣಿಜ್ಯ ಸಚಿವಾಲಯದಿಂದ ಹೊರಡಿಸಿರುವ ಅಧಿಸೂಚನೆಯಂತೆ ವಿದೇಶಿ ವ್ಯಾಪಾರ ನೀತಿ (FTP) 2023 ರ ಪ್ರಕಾರ, ಮುಂದಿನ ಆದೇಶಗಳವರೆಗೆ ಪಾಕಿಸ್ತಾನದಿಂದ ಬರುವ ಅಥವಾ ರಫ್ತು ಮಾಡುವ ಎಲ್ಲಾ ಸರಕುಗಳ ನೇರ ಅಥವಾ ಪರೋಕ್ಷ ಆಮದು ಅಥವಾ ಸಾಗಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಿಟ್ಟಿನಲ್ಲಿ ಒಂದು ನಿಬಂಧನೆಯನ್ನು ಸೇರಿಸಲಾಗಿದೆ ಎಂದು ಮೇ 2 ರ ಅಧಿಸೂಚನೆಯಲ್ಲಿ ತಿಳಿಸಿದೆ.

ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯ ಹಿತಾಸಕ್ತಿಯಲ್ಲಿ ಈ ನಿರ್ಬಂಧವನ್ನು ವಿಧಿಸಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಅಧಿಸೂಚನೆಯಲ್ಲಿ ತಿಳಿಸಿದೆ. ಈ ನಿಷೇಧಕ್ಕೆ ಯಾವುದೇ ವಿನಾಯಿತಿ ಬೇಕೆಂದರೆ ಭಾರತ ಸರ್ಕಾರದ ಅನುಮೋದನೆಯ ಅಗತ್ಯವಿರುತ್ತದೆ.

ವಿದೇಶಿ ವ್ಯಾಪಾರ ನೀತಿಯಡಿ “ಪಾಕಿಸ್ತಾನದಿಂದ ಆಮದು ನಿಷೇಧ” ಎಂಬ ಶೀರ್ಷಿಕೆಯೊಂದಿಗೆ ನಿಬಂಧನೆಗಳ ಬಗ್ಗೆ ಹೀಗೆ ಹೇಳಲಾಗಿದೆ. ಪಾಕಿಸ್ತಾನದಿಂದ ಬರುವ ಎಲ್ಲಾ ಸರಕುಗಳ ನೇರ ಅಥವಾ ಪರೋಕ್ಷ ಆಮದು ಅಥವಾ ಸಾಗಣೆಯನ್ನು, ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗುತ್ತದೆ ಎಂದು ಹೇಳಲಾಗಿದೆ.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಪಹಲ್ಗಾಮ್ ದಾಳಿಯಲ್ಲಿ ಹೆಚ್ಚಿನ ಪ್ರವಾಸಿಗರು ಸೇರಿದಂತೆ 26 ಮಂದಿ ಮೃತಪಟ್ಟಿದ್ದರು.