
ಪಾಣೆಮಂಗಳೂರು ಬಂಗ್ಲೆಗುಡ್ಡೆಯ ಬಳಿ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆ ಸೃಷ್ಟಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಸ್ಥಳೀಯ ಮನೆಗಳ ಆವರಣಕ್ಕೂ ನೀರು ನುಗ್ಗುತ್ತಿದೆ.

ಈ ಕುರಿತು ಸ್ಥಳೀಯರ ದೂರಿನ ಮೇರೆಗೆ ಪುರಸಭೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಹಲವು ದಿನ ಕಳೆದರೂ ಇನ್ನೂ ಕೂಡ ಪರಿಹಾರ ದೊರೆತಿಲ್ಲ.
ಮಳೆಯಿಂದಾಗಿ ರಸ್ತೆಯಲ್ಲಿ ಮೊಣಕಾಲಿನವರೆಗೂ ನೀರು ನಿಲ್ಲುತ್ತಿದ್ದು, ಬಂಗ್ಲೆಗುಡ್ಡೆಯಲ್ಲಿ ಕಾರ್ಯಾಚರಿಸುತ್ತಿರುವ ಬಿಸಿಎಂ ಹಾಸ್ಟೆಲ್‌ನ ವಿದ್ಯಾರ್ಥಿಗಳು ಇದೇ ನೀರನ್ನು ದಾಟಿ ಶಾಲೆಗೆ ಹೋಗಬೇಕಾದ ಸ್ಥಿತಿ ಇದೆ. ಖಾಸಗಿ ಜಾಗಗಳಲ್ಲಿ ಈ ರೀತಿ ನೀರು ನಿಂತಾಗ ಸಾಂಕ್ರಾಮಿಕ ರೋಗ ಹರಡುತ್ತದೆ ಎಂದು ಎಚ್ಚರಿಕೆ ನೀಡುವ ಆರೋಗ್ಯ ಇಲಾಖೆ ಪ್ರಸ್ತುತ ಇಲ್ಲಿ ಪುರಸಭೆ ಪ್ರಾಯೋಜಿತ ಕೃತಕ ನೆರೆಯ ಕುರಿತು ಏನು ಹೇಳುತ್ತದೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.














