
ಪುತ್ತೂರು: ಭಾರತೀಯರು ಉಳಿತಾಯದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ, ಆದರೆ ಹೂಡಿಕೆಯ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿಸುವುದಿಲ್ಲ. ಈ ಆಲೋಚನೆ ಬದಲಾದಾಗ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ. ಹೂಡಿಕೆ ಸರಳವಾದ ವಿಚಾರ ಅದರ ಕುರಿತು ಸೂಕ್ತ ಜ್ಞಾನ ಸಂಪಾದಿಸಿಕೊಳ್ಳಬೇಕು. ಪ್ರಸ್ತುತ ಎಲ್ಲವೂ ಡಿಜಿಟಲ್ ಆಗಿರುವ ಕಾರಣ ಹೂಡಿಕೆ ಮತ್ತು ಅದರ ಪ್ರಕ್ರಿಯೆಗಳು ಸರಳವಾಗಿದೆ. ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಿದಾಗ ಕಷ್ಟಕಾಲದಲ್ಲಿ ನೆರವಾಗುತ್ತದೆ. ಈ ಮೂಲಕ ನಾವು ದುಡಿದ ದುಡ್ಡು ನಮಗೋಸ್ಕರ ದುಡಿಯುವಂತೆ ಮಾಡಬಹುದು ಎಂದು ‘ಬಿಎಸ್‌ಇ’ ನ ಎಂಪಾನಲ್ಡ್ ರಿಸೋರ್ಸ್ ಪರ್ಸನ್ ರಾಮಚಂದ್ರ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಐಕ್ಯುಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ಕ್ಯಾಪಿಟಲ್ ಮಾರ್ಕೆಟಿಂಗ್ ಅವಾರ್ನೆಸ್; ಫೈನಾನ್ಶಿಯಲ್ ಪ್ಲಾನ್ ಮತ್ತು ಮ್ಯೂಚುವಲ್ ಫಂಡ್ ಎಂಬ ವಿಷಯದ ಕುರಿತಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ವಿಜಯ ಸರಸ್ವತಿ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಕಾರ್ಮರ್ಸ್ ಫೆಸ್ಟ್ ಮ್ಯಾಗ್ನಮ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಕವನ ಪೈ, ಅಕ್ಷಿತ, ಸ್ವಾತಿ ಕಾರಂತ್, ಹರ್ಷ, ಅನುಶ್ರೀ, ರೂಪಾ, ಕೃತಿ, ಸ್ವಾತಿ, ಯುಕ್ತ , ಅನುಷಾ, ರಶ್ಮಿ ಇವರಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ವಿದ್ಯಾರ್ಥಿನಿ ಕವನ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸ್ವಪ್ನಾ ರೈ ಸ್ವಾಗತಿಸಿ, ಮನೋಜ್ ವಂದಿಸಿದರು. ಸ್ವಾತಿಕ ಕಾರ್ಯಕ್ರಮ ನಿರೂಪಿಸಿದರು.














