
ಮಂಗಳೂರು: ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್)ಯ ಶ್ವಾನದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಾಂಬ್ ಪತ್ತೆ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಲಾಬ್ರಡೋರ್ ಜಾತಿಗೆ ಸೇರಿದ ಶ್ವಾನ ಲೀನಾ ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದೆ.

ಲೀನಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ನ.16ರಿಂದ ಆಹಾರ ಸೇವಿಸುತ್ತಿರಲಿಲ್ಲ. ಹೀಗಾಗಿ ಆಕೆಗೆ ಗ್ಲುಕೋಸ್ ನೀಡಲಾಗುತ್ತಿತ್ತು. ಆದರೂ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ನ.21ರಂದು ಸಾವಿಗೀಡಾಗಿದೆ.
ಲೀನಾಳನ್ನು ಸೇನಾ ಗೌರವದೊಂದಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

2020 ಜನವರಿ 12ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿ ಆದಿತ್ಯ ರಾವ್ ಇರಿಸಿದ್ದ ಬಾಂಬ್‍ನ್ನು ಲೀನಾ ಪತ್ತೆ ಮಾಡಿತ್ತು.














