ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಒಂದೇ ಆ್ಯಂಬುಲೆನ್ಸ್ ನಲ್ಲಿ ಜಿಲ್ಲಾಡಳಿತ ಅನುಮತಿಯನ್ನು ಪಡೆಯದೇ ಜಿಲ್ಲೆಯಿಂದ ಹೊರ ಹೋದ ಆರೋಪ ; ಅಂಬ್ಯುಲೆನ್ಸ್ ವಶಕ್ಕೆ – ಮಹಮ್ಮದ್ ಜುನೈದ್ ಸಹಿತ 7 ಜನರ ಮೇಲೆ ಸೊಮೋಟೊ ಪ್ರಕರಣ – ಕಹಳೆ ನ್ಯೂಸ್

ಮಡಿಕೇರಿ/ಪುತ್ತೂರು : ಸರಕಾರದ ನಿಯಮಗಳನ್ನು ಗಾಳಿಗೆ ತೂರಿ 7 ಜನ ಒಂದೇ ಆ್ಯಂಬುಲೆನ್ಸ್ ನಲ್ಲಿ ಪ್ರಯಾಣಿಸಿದ ಹಾಗೂ ಜಿಲ್ಲಾಡಳಿತ ಯಾವುದೇ ಅನುಮತಿಯನ್ನು ಪಡೆಯದೇ ಲಾಕ್ ಡೌನ್ ಉಲ್ಲಂಘಿಸಿ ಜಿಲ್ಲೆಯಿಂದ ಹೊರ ಹೋದ ಆರೋಪದ ಮೇರೆಗೆ 7 ಜನರ ಮೇಲೆ ಸೊಮೋಟೊ ಪ್ರಕರಣವನ್ನು ಪುತ್ತೂರು ನಗರ ಠಾಣೆ ಪೊಲೀಸರು ದಾಖಲಿಸಿಕೊಂಡು ಕೃತ್ಯಕ್ಕೆ ಬಳಸಲಾದ ಅಂಬ್ಯುಲೆನ್ಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು ತಾಲೂಕು ನಿವಾಸಿಗಳಾದ ಪುರುಷರಕಟ್ಟೆಯ ಇಂದಿರಾ ನಗರದ ಮಹಮ್ಮದ್ ಜುನೈದ್, ಪುರುಷರಕಟ್ಟೆಯ ಮಹಮ್ಮದ್ ಇಲ್ಯಾಸ್, ಪುರುಷರಕಟ್ಟೆಯ ಸಲೀಮುದ್ದೀನ್ ಯಾನೆ ಪಾಪು, ಮೂಡ್ನೂರು ಕುಡ್ಪುನಡ್ಕ ಅಬ್ದುಲ್ ರಜಾಕ್, ಅಮ್ಚಿನಡ್ಕದ ರಶೀದ್, ಮೂಡ್ನೂರು ಉಜುರುವಳ್ಳಿ ಸಂಶುದ್ದೀನ್, ಮೂಡ್ನೂರು ಟಪಾಲುಕಟ್ಟೆ ನಿವಾಸಿ ಮಹಮ್ಮದ್ ಇರ್ಷಾದ್ ಒಟ್ಟು 7 ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.


ಮಹಮ್ಮದ್ ಜುನೈದ್, ಮಹಮ್ಮದ್ ಇಲ್ಯಾಸ್ ಹಾಗೂ ಸಲೀಮುದ್ದೀನ್ ಎಂಬವರು ಪುರುಷರಕಟ್ಟೆಯಿಂದ KA.51.AB.3455 ರಿಜಿಸ್ಟ್ರೇಷನ್ ನಂಬರಿನ ಅಂಬ್ಯುಲೆನ್ಸ್ ನಲ್ಲಿ
ಎ.12 ರಂದು ರಾತ್ರಿ 10 ಕ್ಕೆ ನರಿಮೊಗರು ಪುರುಷರಕಟ್ಟೆಯಿಂದ ಹೊರಟು ಬಳಿಕ ಉಳಿದ ನಾಲ್ಕು ಆರೋಪಿಗಳನ್ನು ಅದೇ ಅಂಬ್ಯುಲೇನ್ಸ್ ನಲ್ಲಿ ಕೂರಿಸಿಕೊಂಡು ಮಡಿಕೇರಿ ಮಾರ್ಗವಾಗಿ ಮೈಸೂರು ಕಡೆ ತೆರಳಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.


ಕೋವಿಡ್- 19 ಎಂಬ ರೋಗವು ದೇಶದಾದ್ಯಂತ ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟುವ ಉದ್ದೇಶದಿಂದ ಮಾ. 22 ರಿಂದ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಈ ಸಂದರ್ಭ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ರೋಗ ಹರಡುವುದನ್ನು ನಿಯಂತ್ರಿಸಬೇಕು ಎಂಬ ನಿಯಮವನ್ನು ಕರ್ನಾಟಕ ಸರಕಾರ ಹಾಗೂ ದಕ ಜಿಲ್ಲಾಡಳಿತ ಹೊರಡಿಸಿದೆ. ಹೀಗಾಗಿಯೂ ಒಂದೇ ವಾಹನದಲ್ಲಿ 7 ಜನರು ಪ್ರಯಾಣಿಸಿರುವುದು ಅಲ್ಲದೆ ಜಿಲ್ಲೆಯಿಂದ ಜಿಲ್ಲೆಗೆ ಪ್ರಯಾಣ ನಿಷೇಧ ಇರುವಾಗ ಗಡಿ ದಾಟಿರುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೊಡಗು ಜಿಲ್ಲೆಯ ಕುಶಾಲನಗರ ನಗರ ಠಾಣಾ ಸರಹದ್ದಿನ ಕೊಪ್ಪ ಎಂಬಲ್ಲಿ 7 ಜನರನ್ನು ಹೇರಿಕೊಂಡು ತೆರಳುತ್ತಿದ್ದ ಆ್ಯಂಬುಲೆನ್ಸ್ ತಡೆದ ಅಲ್ಲಿನ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಪುತ್ತೂರಿಗೆ ಕಳುಹಿಸಿದ್ದರು.

ಲಾಕ್ ಡೌನ್ ನಿಯಮದಂತೆ ತುರ್ತು ಅಗತ್ಯಕ್ಕೆ ಅಂಬ್ಯುಲೆನ್ಸ್ ಬಳಸಲು ಜಿಲ್ಲಾಡಳಿತದ ಅನುಮತಿಯನ್ನು ಪಡೆಯದಿರುವುದು ಹಾಗೂ ಜಿಲ್ಲೆಯ ಗಡಿಭಾಗವನ್ನು ಪ್ರವೇಶಿಸುವ ಸಂದರ್ಭ ವಾಹನದಲ್ಲಿ 7 ಜನರು ಇರುವುದನ್ನು ಜಿಲ್ಲಾ ಚೆಕ್ ಪೋಸ್ಟ್ ನಲ್ಲಿ ಮರೆ ಮಾಚಿರುವುದನ್ನು ಮನಗಂಡ ಪೊಲೀಸರು ಆರೋಪಿಗಳ ವಿರುದ್ದ ಸೊ ಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತೂರಿನಿಂದ ಮೈಸೂರಿಗೆ ಪ್ರಯಾಣಿಕರನ್ನು ರೋಗಿಗಳ ಸೋಗಿನಲ್ಲಿ ಸಾಗಿಸಲು ಆಂಬ್ಯುಲೆನ್ಸ್ ಅನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಅರೋಪವು ಸಾರ್ವಜನಿಕವಾಗಿ ಕೇಳಿಬಂದಿತ್ತು ಈ ಬಗ್ಗೆ ವಿಸ್ತೃತ ತನಿಖೆ ಇನ್ನಷ್ಟೇ ಆಗಬೇಕಿದೆ.















