
ಸ್ಯಾಂಡಲ್‍ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ. ಇಂದು ಮುಂಜಾನೆ ಈ ಅವಘಡ ಸಂಭವಿಸಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ.
ಪೊಗರು ಚಿತ್ರದ ಶೂಟಿಂಗ್ ಮುಗಿಸಿ ಬಳ್ಳಾರಿಯಿಂದ ಬೆಂಗಳೂರಿಗೆ ಹಿಂತಿರುಗುವಾಗ ಈ ಘಟನೆ ಸಂಭವಿಸಿದೆ. ಬೆಳಗಿನ ಜಾವ ಸುಮಾರು 4 ಗಂಟೆಗೆ ಅಪಘಾತವಾಗಿದ್ದು, ಕಾರು ಡ್ರೈವರ್ ಮುತ್ತು ಅವರ ಕೈಗೆ ಹಾನಿಯಾಗಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ನಂದ ಕಿಶೋರ್ ನಿರ್ದೇಶಿಸುತ್ತಿರುವ ಪೊಗರು ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಕಳೆದ 15 ದಿನಗಳಿಂದ ನಾಯಕ ನಟ ಧ್ರುವ ಸರ್ಜಾ ಸೇರಿದಂತೆ ಚಿತ್ರತಂಡ ಬಳ್ಳಾರಿಯಲ್ಲಿ ಬೀಡುಬಿಟ್ಟಿತು. ಇಂದು ಮುಂಜಾನೆ ಶೂಟಿಂಗ್ ಮುಗಿಸಿ ಫೋರ್ಡ್ ಫಿಯೆಸ್ಟಾ ಕಾರಿನಲ್ಲಿ ಸ್ನೇಹಿತರೊಂದಿಗೆ ಮರಳುವಾಗ ಈ ಅಹಿತಕರ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಪೊಗರು ಚಿತ್ರದ ಬಗ್ಗೆ ಸ್ಯಾಂಡಲ್‍ವುಡ್‍ನಲ್ಲಿ ಭಾರೀ ನಿರೀಕ್ಷೆಯಿದ್ದು, ಈ ಸಿನಿಮಾ ಪಂಚ ಭಾಷೆಯಲ್ಲಿ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವಾತ್ಸವ್ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಬಿ.ಕೆ ಗಂಗಾಧರ್ ನಿರ್ಮಿಸುತ್ತಿದ್ದು, ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಧ್ರುವ ಸರ್ಜಾ ಪೊಗರು ತೋರಿಸಲಿದ್ದಾರೆ.














