
ಬಿ.ಸಿ.ರೋಡ್: ಬಿ.ಸಿ.ರೋಡ್‍ನಿಂದ ಶಿರಾಡಿಯ ಅಡ್ಡಹೊಳೆಯವರೆಗಿನ ರಾಷ್ಟ್ರೀಯ ಹೆದ್ದಾರಿ ಹೆಸರಿಗಷ್ಟೇ ಮಾತ್ರ. ಎಲ್ಲವೂ ನಿರೀಕ್ಷೆಯಂತೆ ನಡೆಯುತ್ತಿದ್ದರೆ, ಎಂದೋ ಚತುಷ್ಪಥವಾಗಬೇಕಿತ್ತು. ಆದರೆ 2 ವರ್ಷಗಳ ಹಿಂದೆ ಪ್ರಾರಂಭಗೂಂಡಿದ್ದ ಕಾಮಗಾರಿ ಅರ್ಧಕ್ಕೇ ನಿಂತು ವರ್ಷವೇ, ಕಳೆದಿದೆ. ರಸ್ತೆ ತುಂಬ ಮೃತ್ಯುಕೂಪಗಳನ್ನು ಹೊದ್ದುಕೂಂಡಿರುವ, ಈ ರಸ್ತೆ ಪ್ರಯಾಣವೇ ದುಸ್ತರವಾಗಿದೆ. ಮಾಣಿ-ಬಿ.ಸಿ. ರೋಡ್ ನಡುವೆ ಇರುವುದು ಬರೀ ಹೊಂಡಗಳೇ.

ಇದರಿಂದ ಸಂಕಷ್ಟ ಅನುಭವಿಸುತ್ತಿರುವುದು ಪ್ರಯಾಣಿಕರು ಹಾಗೂ ವಾಹನ ಸವಾರರು. ಸ್ಥಳೀಯರಿಗೂ ಆಗುತ್ತಿರುವ ಕಿರಿಕಿರಿ ಕಡಿಮೆಯೇನಿಲ್ಲ. ಈ ರಸ್ತೆಯಲ್ಲಿ ಆಗಿರುವ ಅಧ್ವಾನ-ಅವಾಂತರ ನೋಡಿದರೆ, ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಎನ್ನುವಂತಿಲ್ಲ. ಜತೆಗೆ ಸುರಿದ ಮಳೆಯಿಂದ ರಸ್ತೆ ಇನ್ನಷ್ಟು ಹಾಳಾಗಿದೆ. ರಸ್ತೆ, ಹೊಂಡ ಯಾವುದು ಎಂಬುದೇ ಗೊಂದಲವಾಗಿದೆ. ಪಾಣೆಮಂಗಳೂರಿನಿಂದ ಉಪ್ಪಿನಂಗಡಿವರೆಗೆ ಸೃಷ್ಟಿಯಾಗಿರುವ ಹೊಂಡಗಳು ಮೃತ್ಯು ಕೂಪಗಳಾಗಿ ಅಪಾಯವನ್ನು ಆಹ್ವಾನಿಸುತ್ತಿವೆ.

ಚಾರ್ಮಾಡಿ ಘಾಟಿ ಬಂದ್ ಬಳಿಕ ಈ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದು, ಮತ್ತಷ್ಟು ಅಪಾಯಕಾರಿ ಎನಿಸಿದೆ. ಈ ರಸ್ತೆಯಲ್ಲಿ ಯಾವ ಸುರಕ್ಷಾ ನಿಯಮಗಳೂ ಪಾಲನೆಯಾಗುತ್ತಿಲ್ಲ. ಹೆದ್ದಾರಿ ಇಷ್ಟೊಂದು ಶೋಚನೀಯ ಸ್ಥಿತಿಯಲ್ಲಿದ್ದರೂ ಹೆದ್ದಾರಿ ಪ್ರಾಧಿಕಾರ ಸಹಿತ ಸಂಬಂಧಪಟ್ಟ ಇಲಾಖೆ, ಜಿಲ್ಲಾಡಳಿತ ಇನ್ನಾದರೂ ಇತ್ತ ಗಮನ ಹರಿಸಬೇಕು.














