
ಕೇಂದ್ರ ಸರಕಾರವು ದೇಶದ 255 ಜಿಲ್ಲೆಗಳಲ್ಲಿ ಜಲವರ್ಧನ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ರಾಜ್ಯದ 18 ಜಿಲ್ಲೆಗಳು ಮಹತ್ವದ ‘ಜಲಶಕ್ತಿ’ ಅಭಿಯಾನಕ್ಕೆ ಆಯ್ಕೆಯಾಗಿವೆ. ತೀವ್ರ ಜಲಾಭಾವ ಎದುರಿಸುತ್ತಿರುವ ದೇಶದ ಹಲವು ಜಿಲ್ಲೆಗಳನ್ನು ಗುರುತಿಸಿ, ಆ ಜಿಲ್ಲೆಗಳ ಆಯ್ದ ಬ್ಲಾಕ್‍ಗಳಲ್ಲಿ ಜಲಸಂರಕ್ಷಣೆ ಚಟುವಟಿಕೆಗಳನ್ನು ಕೈಗೊಳ್ಳುವುದು, ಪ್ರಧಾನಿ ಮೋದಿ ಅವರ ಸಂಕಲ್ಪದ ‘ಜಲಶಕ್ತಿ’ ಆಂದೋಲನದ ಗುರಿ.
ಈ ಅಭಿಯಾನದಡಿ ಆಯ್ಕೆಯಾದ ರಾಜ್ಯದ 18ಜಿಲ್ಲೆಗಳಿಗೂ ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ದರ್ಜೆಯ ಐಎಎಸ್ ಅಧಿಕಾರಿಗಳ ಉಸ್ತುವಾರಿಯ ಸಮಿತಿ ರಚಿಸಲಾಗಿದೆ. ಕೇಂದ್ರ ಜಲಶಕ್ತಿ ಇಲಾಖೆ, ಅಭಿವೃದ್ಧಿ, ಬಾಹ್ಯಾಕಾಶ, ರಕ್ಷಣೆ, ಪೆಟ್ರೋಲಿಯಂ, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಪರಿಸರ, ಕೃಷಿ, ಕೈಗಾರಿಕೆ ಸಹಿತ ವಿವಿಧ ಇಲಾಖೆಗಳಿಂದ ಈ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಆಯ್ಕೆಯಾದ ಜಿಲ್ಲೆಗಳಲ್ಲಿ ಐಎಎಸ್ ಅಧಿಕಾರಿಯ ಅಧ್ಯಕ್ಷತೆ ಮತ್ತು ಜಿಲ್ಲಾಧಿಕಾರಿಗಳ ಸಂಚಾಲಕತ್ವದಲ್ಲಿ ಇಲಾಖೆ ಮಟ್ಟದ ಸಮನ್ವಯ ಸಮಿತಿ ರಚಿಸಲಾಗುತ್ತದೆ.















