
ಅಂತರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿಸಿರುವ ಬಿಟ್ ಕಾಯಿನ್ ಡೀಲ್ ದಂಧೆ ನಡೆಸುತ್ತಿದ್ದ, ತಂಡದ ಮಾಸ್ಟರ್ ಮೈಂಡ್ ಸೇರಿದಂತೆ 13 ಜನರನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ತಾಲೂಕಿನ ಅಜೆಕಾರು ಗ್ರಾಮದ ಕಾಡುಹೊಳೆ ಕವಿತಾ ಮೂಲ್ಯ ಸೇರಿದಂತೆ 13 ಮಂದಿ ಈ ದಂಧೆಯಲ್ಲಿ ತೊಡಗಿದ್ರು. ಸುಮಾರು 9ರಿಂದ 10 ಕೋಟಿ ರೂ ವ್ಯವಹಾರ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಟ್ ಕಾಯಿನ್ ದಂಧೆಯ ಮೂಲಕ ಲಾಭಗಳಿಸಿ, ಲಕ್ಷಾಂತರ ರೂ ಹಣ ಹೂಡಿ ಬಳಿಕ ಹಣ ಕಳೆದುಕೊಂಡು ವಂಚನೆಗೊಳದಾವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಚಿಕ್ಕಮಗಳೂರು ನಗರ ಠಾಣೆಯ 30 ಜನ ಪೊಲೀಸರ ತಂಡ ಪ್ರಮುಖ ಆರೋಪಿಯೊಂದಿಗೆ ಕಾಡುಹೊಳೆಗೆ ಆಗಮಿಸಿ, ಕವಿತಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸುದೀರ್ಘ ವಿಚಾರಣೆ ನಡೆಸಿ ಕವಿತಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈಕೆಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೀಗ ಕವಿತಾ ಮೂಲ್ಯ ಚಿಕ್ಕಮಗಳೂರು ಜೈಲಿನಲ್ಲಿ ಬಂಧನದಲ್ಲಿದ್ದಾಳೆ ಎಂದು ಚಿಕ್ಕಮಗಳೂರು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ 4 ಕೋಟಿ ಮೌಲ್ಯದ 10 ಕಾರುಗಳು, 5 ಲಕ್ಷ ಮೌಲ್ಯದ ಆಭರಣಗಳು ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.















