
ಪುತ್ತೂರು: ಮಾಧ್ಯಮ ಬದಲಾವಣೆಯತ್ತ ಸಾಗಿದೆ. ಆದರೆ ಇದಕ್ಕೆ ನಮ್ಮನ್ನು ನಾವು ಹೇಗೆ ಅಳಡಿಸಿಕೊಂಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಪತ್ರಿಕೋದ್ಯಮವು ಜನರ ಜೀವನ ಶೈಲಿಯನ್ನೇ ಬದಲಾಯಿಸುತ್ತದೆ. ಇಂದು ಸೋಶಿಯಲ್ ಮೀಡಿಯಾವು ಸಾಂಪ್ರದಾಯಿಕ ಪತ್ರಿಕೋದ್ಯಮವನ್ನೂ ಮೀರಿ ಕೆಲಸ ಮಾಡುತ್ತಿದೆ. ಹಾಗಾಗಿ ಭವಿಷ್ಯತ್ಕಾಲಕ್ಕೆ ನಾವು ಈಗಲೇ ಸಿದ್ಧರಾಗಬೇಕಿದೆ ಎಂದು ದುಬೈ ಮೂಲದ ಎಪ್ಲೈಡ್ ಮೀಡಿಯಾ ಹೈಯರ್ ಕಾಲೇಜ್ ಆಫ್ ಟೆಕ್ನಾಲಜಿ ಪ್ರಾಧ್ಯಾಪಕ ಡಾ. ಶ್ರೀಶ ಎಮ್ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಸ್ಪಂದನ ಸಭಾಂಗಣದಲ್ಲಿ ಪತ್ರಿಕೋದ್ಯಮ ಹಾಗೂ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಬದಲಾವಣೆಯತ್ತ ಮಾಧ್ಯಮ: ನೀವು ಸಿದ್ಧರಿದ್ದೀರಾ? ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದರು. ತಾಂತ್ರಿಕ ಕೌಶಲ್ಯವಿದ್ದರೆ ಮಾತ್ರ ಮಾಧ್ಯಮ ಲೋಕದಲ್ಲಿ ಉಳಿಗಾಲ. ಪ್ರಪಂಚದ ಉಳಿದ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಇಂಟರ್ನೆಟ್ ಬಹಳ ಅಗ್ಗ. ಹಾಗೆಯೇ ಸೋಶಿಯಲ್ ಮೀಡಿಯಾದ ಬಳಕೆ ದೇಶದಲ್ಲಿ ಜರ್ನಲಿಸಂ ಕಲ್ಪನೆಯನ್ನೇ ಕ್ರಾಂತಿಕಾರಕವಾಗಿ ಬದಲಾಯಿಸಿದೆ. ಕಿರುಚಿತ್ರಗಳು, ಜಾಹಿರಾತುಗಳು, ಆ್ಯನಿಮೇಶನ್ ವೀಡಿಯೋಗಳು ಕೌಶಲ್ಯದ ಜೊತೆಗೆ ಉತ್ತಮ ಸಂಭಾವನೆಯನ್ನೂ ಒದಗಿಸುವ ವೇದಿಕೆಗಳಾಗಿವೆ. ಎಲ್ಲಾ ರೀತಿಯ ಮಾಧ್ಯಮ, ಕೇಂದ್ರಿತ ಕೆಲಸಗಳಿಗೆ ಕೌಶಲ್ಯ ನಿಪುಣತೆಯೊಂದೇ ಮಾನದಂಡ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಇತ್ತೀಚಿಗಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮಾಧ್ಯಮಗಳಿಂದ ಹೆಚ್ಚು ಹೆಚ್ಚು ಅವಕಾಶಗಳು ಒದಗಿ ಬರುತ್ತಿವೆ. ಮುದ್ರಣ ಮಧ್ಯಮವು ಓದುವ ಕೌಶಲವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪ್ರಸ್ತುತ ಸೋಶಿಯಲ್ ಮೀಡಿಯಾಗಳು ಕ್ರಾಂತಿಕಾರಿ ಬದಲಾವಣೆಯತ್ತ ಮುನ್ನುಗ್ಗುತ್ತಿವೆ. ಸಮಾಜದ ಆಗುಹೋಗುಗಳನ್ನು ಮನೆಯಲ್ಲಿಯೇ ಕುಳಿತು ನಾವು ತಿಳಿದುಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಪ್ರತಿಕೊದ್ಯಮ ವಿಭಾಗ ಮುಖ್ಯಸ್ಥೆ ತಾರಾ, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಜೆ. ಬಿ. ಸಿಕ್ವೇರಾ ಉಪಸ್ಥತರಿದ್ದರು. ವಿದ್ಯಾರ್ಥಿನಿ ಚರಿಷ್ಮ ಮತ್ತು ಬಳಗದವರು ಪ್ರಾರ್ಥಸಿ, ವಿನೋಲಿಯಾ ಪ್ರಿಯಾಂಕ ಸ್ವಾಗತಿಸಿದರು, ಡಿಂಪಲ್ ತಾವ್ರೋ ವಂದಿಸಿದರು. ಕ್ಯಾರಲ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.















