
ಪುತ್ತೂರು: ಸ್ಪರ್ಧೆಗಳಲ್ಲಿ ಭಾಗವಹಿಸಿದ ಪ್ರತಿಯೊಬ್ಬ ವ್ಯಕ್ತಿಗೂ ಪ್ರಶಸ್ತಿ ಲಭಿಸಲು ಸಾಧ್ಯವಿಲ್ಲ. ಆದರೆ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ದೊರಕುವ ಅನುಭವ ಅವರ್ಣನೀಯ. ಶಿಸ್ತುಬದ್ಧವಾಗಿ ಸ್ಪರ್ಧೆಗಳನ್ನು ಆಯೋಜಿಸಿದ ಕಾಲೇಜಿನ ಗಣಕ ವಿಜ್ಞಾನ ವಿಭಾಗವು ಇತರರಿಗೆ ಮಾದರಿಯಾಗಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.

ಅವರು ಕಾಲೇಜಿನ ಗಣಕ ವಿಜ್ಞಾನ ವಿಭಾಗ ಮತ್ತು ಪಿನಾಕಲ್ ಐಟಿ ಕ್ಲಬ್ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಜುಲೈ 17ರಂದು ಏರ್ಪಡಿಸಲಾದ ಇಂಟ್ರ-ಡಿಪಾರ್ಟ್‍ಮೆಂಟಲ್ ಸ್ಪರ್ಧಾ ಕಾರ್ಯಕ್ರಮ ಐಟಿ ಫೆಸ್ಟ್ ‘ವಿಶನ್ 2019’ ಇದರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಮುಂದೆ ಔದ್ಯೋಗಿಕ ಸಂದರ್ಶನಗಳನ್ನು ಧೈರ್ಯವಾಗಿ ಎದುರಿಸಲು ಸಹಕಾರಿಯಾಗುತ್ತದೆ. ಮಾಡುವ ಯಾವುದೇ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದಲ್ಲಿ ಯಶಸ್ಸು ಖಂಡಿತ. ಧನಾತ್ಮಕ ಚಿಂತನೆಗಳು ಧನಾತ್ಮಕ ಫಲಿತಾಂಶವನ್ನು ತಂದುಕೊಡುತ್ತವೆ ಎಂದರು.
ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ, ಸ್ಪರ್ಧಾಮನೋಭಾವ ಹಾಗೂ ಪರಿಸರದ ಬಗ್ಗೆ ವಿಶೇಷ ಕಾಳಜಿ ಉಂಟುಮಾಡುವ ಸದುದ್ದೇಶದಿಂದ ಪ್ರಾರಂಭಿಸಿದ ಈ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ಕಾಗದ, ಫ್ಲೆಕ್ಸ್ ಮುಂತಾದ ವಸ್ತುಗಳ ಬಳಕೆಯನ್ನು ಕಡಿಮೆಗೊಳಿಸಲಾಗಿದೆ. ಅವಶ್ಯವಿರುವಲ್ಲಿ ಅವುಗಳ ಮರುಬಳಕೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಒಗ್ಗಟ್ಟಾಗಿ ಕಲಿತು, ಪ್ರತ್ಯೇಕ ತಂಡದಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸಿದ ವಿದ್ಯಾರ್ಥಿಗಳು ಅಭಿನಂದನೀಯರು ಎಂದರು.
ವಿದ್ಯಾರ್ಥಿಗಳಿಗೆ ತಮ್ಮ ಸ್ಪರ್ಧಾ ಸಾಮಥ್ರ್ಯ ಮತ್ತು ಕೌಶಲ್ಯವನ್ನು ವೃದ್ಧಿಸುವ ಉದ್ದೇಶದಿಂದ ಇ- ಆ್ಯಡ್, ಇ-ಪೇಪರ್, ಇ- ಕೊಲಾಜ್, ಇ-ಮೆನೇಜರ್, ಇ-ಕ್ವಿಜ್, ಇ-ಗೇಮ್ಸ್, ಇ-ಡಿಸೈನ್, ಇ-ಕೋಡ್, ಇ-ಬುಲೆಟಿನ್, ಇ-ಮೋಡೆಲ್, ಇ-ಹಂಟ್, ಗ್ರೂಪ್ ಫೋಕ್ ಡಾನ್ಸ್ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಮಗ್ರ ಪ್ರಶಸ್ತಿಯನ್ನು ರನ್ ಟೈಮ್ ಟೆರರ್ಸ್ ಪಡೆದುಕೊಂಡರೆ, ದ್ವಿತೀಯ ಪ್ರಶಸ್ತಿಯನ್ನು ವಿನ್ ಡೊವ್ಸ್ ತಂಡ ತನ್ನದಾಗಿಸಿಕೊಂಡಿತು. ತೃತೀಯ ಪ್ರಶಸ್ತಿಯನ್ನು ಟೆಕ್ ಈಗಲ್ಸ್ ತಂಡ ಪಡೆದುಕೊಂಡಿತು.
ಐಟಿ ಕ್ಲಬ್‍ನ ಸಂಯೋಜಕಿ ರಾಜೇಶ್ವರಿ ಎಮ್ ‘ವಿಶನ್ 2019’ ಇದರ ಪ್ರಶಸ್ತಿ ವಿಜೇತರ ವಿವರ ನೀಡಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವಾರಿಜ ಎಮ್, ಸೌಮ್ಯ, ಕಲಂದರ್ ಶರೀಫ್, ಅನುಶ್ರೀ ಎನ್ ಕೆ ಮತ್ತು ರಮೇಶ್ ಕೆ ಸಹಕರಿಸಿದರು.
ವಿದ್ಯಾರ್ಥಿನಿ ವೈಷ್ಣವಿ ಮತ್ತು ಬಳಗದವರು ಪ್ರಾರ್ಥಿಸಿದರು. ಪಿನ್ಯಾಕಲ್ ಐಟಿ ಕ್ಲಬ್‍ನ ಅಧ್ಯಕ್ಷ ಶರ್ಮನ್ ಬ್ಯಾಪ್ಟಿಸ್ಟ್ ರಾಡ್ರಿಗಸ್ ಸ್ವಾಗತಿಸಿದರು. ಕ್ಲಬ್‍ನ ಉಪಾಧ್ಯಕ್ಷ ಶರತ್ ಕೆ. ವಿ. ಉಪಸ್ಥಿತರಿದ್ದರು. ರಿಚಾ ಜುವೆಲ್ ಡಿಕೋಸ್ಟ ವಂದಿಸಿದರು. ಶೈನಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.













