
ಎಡಮೊಗ್ಗೆ : ಕುಂದಾಪುರ ತಾಲೂಕಿನ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಎಡಮೊಗ್ಗೆ ಕುಮ್ಟಿಬೇರು ಎಂಬಲ್ಲಿ ರಾತ್ರಿ ತಾಯಿ ಜೊತೆಗೆ ಮಲಗಿದ್ದ ಎರಡು ಪುಟ್ಟ ಮಕ್ಕಳ ಪೈಕಿ ಒಂದು ಹೆಣ್ಣುಮಗು ನಾಪತ್ತೆಯಾಗಿತ್ತು. ಮಗುವನ್ನು ದುಷ್ಕರ್ಮಿಯೊಬ್ಬ ಕದ್ದೊಯ್ದಿದ್ದಾನೆ ಎನ್ನುವ ತಾಯಿ ಹೇಳಿಕೆಯ ಮೂಲಕ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪುಟ್ಟ ಕಂದಮ್ಮ ಸಾನ್ವಿಕಾಳ ಮೃತದೇಹವು ಕುಬ್ಜಾ ನದಿಯಲ್ಲಿ ಪತ್ತೆಯಾಗಿತ್ತು. ತಾಯಿ ಹಾಗೂ ಮಕ್ಕಳು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಬಲವಾದ ಶಂಕೆ ಪೊಲೀಸರಲ್ಲಿ ಮೂಡಿದೆ.
ಗುರುವಾರ ಬೆಳಿಗ್ಗೆಯಿಂದಲೇ ಪ್ರಕರಣವನ್ನು ಗಂಭೀರವಾಗಿ ಕೈಗೆತ್ತಿಕೊಂಡಿದ್ದ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಸಮರ್ಥ, ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಅವರಿಗೆ ತನಿಖಾ ಉಸ್ತುವಾರಿ ವಹಿಸಿದ್ದರು.

ಸಂಜೆಯವರೆಗೂ ತನಿಖೆ ನಡೆಸಿದ ಬಳಿಕ, ಇಡೀ ಪ್ರಕರಣ ನಾಪತ್ತೆಯಾಗಿದ್ದ ಸಾನ್ವಿಕಾಳ ತಾಯಿ ರೇಖಾ ನಾಯ್ಕ್ ಎಂಬಾಕೆಯ ಸುತ್ತಲೇ ಗಿರಿಕಿ ಹೊಡೆದ ಪರಿಣಾಮ ಗುರುವಾರ ರಾತ್ರಿ ತಾಯಿ ರೇಖಾಳನ್ನು ಶಂಕರನಾರಾಯಣ ಠಾಣೆಗೆ ಕರೆಯಿಸಿ ತನಿಖೆ ಚುರುಕುಗೊಳಿಸಲಾಗಿತ್ತು. ತಾಯಿಯ ವಿಚಾರಣೆ ಬಳಿಕ ಪೊಲೀಸರಿಗೆ ಕೆಲವು ಮಾಹಿತಿಗಳು ಲಭ್ಯವಾಗಿದ್ದು, ಸಾನ್ವಿಕಾ ನಾಪತ್ತೆಯ ಹಿಂದೆ ತಾಯಿ ರೇಖಾ ಕೈವಾಡ ಬಹಿರಂಗಗೊಂಡಿತ್ತು ಎನ್ನಲಾಗಿದೆ.
ತನಿಖೆ ದಿಕ್ಕು ತಪ್ಪಿಸಿದ ಆರೋಪಿ.

ಗುರುವಾರ ಬೆಳಿಗ್ಗೆ ಪ್ರಕರಣ ನಡೆದ ತಕ್ಷಣ, ಮಗುವಿನ ತಾಯಿ ರೇಖಾ ಸ್ಥಳೀಯರಿಗೆ ಸುದ್ಧಿ ಮುಟ್ಟಿಸಿ ಮಗುವಿನ ಅಪಹರಣವಾಗಿದೆ ಎಂದು ತಿಳಿಸಿದ್ದಳು. ಮುಂಜಾನೆ ಸುಮಾರು ನಾಲ್ಕೂವರೆ ಗಂಟೆಗೆ ಮನೆಯ ಹಿಂಬದಿಯ ಬಾಗಿಲಲ್ಲಿ ಒಳನುಗ್ಗಿದ ಬೂದು ಬಣ್ಣದ ಅಂಗಿ ಧರಿಸಿದ ಮುಸುಕುಧಾರಿ ವ್ಯಕ್ತಿಯೊಬ್ಬ ನೇರವಾಗಿ ಮೂವರು ಮಲಗಿದ್ದಲ್ಲಿಗೆ ಬಂದು ತಾಯಿ ಜೊತೆ ಮಲಗಿದ್ದ ಹೆಣ್ಣು ಮಗು ಸಾನ್ವಿಕಾಳನ್ನು ಎತ್ತಿಕೊಂಡಿದ್ದಾನೆ ಎನ್ನಲಾಗಿದೆ. ಮಗು ಅಳುವುದನ್ನು ಕೇಳಿಸಿಕೊಂಡು, ನಿದ್ದೆಯ ಮಂಪರಿನಲ್ಲಿದ್ದ ತಾಯಿ ರೇಖಾ ನಾಯ್ಕ್ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ವ್ಯಕ್ತಿ ಮಗುವನ್ನು ಹೊತ್ತುಕೊಂಡು ಪರಾರಿಯಾಗಿದ್ದ. ನಂತರ ಮನೆ ಸಮೀಪದ ಕುಬ್ಜಾ ನದಿಯನ್ನು ದಾಟಿ ನಾಪತ್ತೆಯಾಗಿದ್ದಾನೆ ಎಂದು ತಾಯಿ ತಿಳಿಸಿದ್ದಾಳೆ.

ಮಗುವನ್ನು ಹೊತ್ತುಕೊಂಡು ಓಡುತ್ತಿದ್ದ ವ್ಯಕ್ತಿಯ ಹಿಂದೆಯೇ ತನ್ನ ಗಂಡು ಮಗುವನ್ನು ಎತ್ತಿಕೊಂಡು ಓಡಿದ್ದೆ. ಅಪರಿಚಿತ ದುಷ್ಕರ್ಮಿಯನ್ನು ಹಿಂಬಾಲಿಸಿಕೊಂಡು ಹೋಗುವ ವೇಳೆ ಕತ್ತಲು ಇದ್ದ ಕಾರಣ ಗೊತ್ತಾಗದೆ ಹೊಳೆಗೆ ತಾನು ಬಿದ್ದಿದ್ದು, ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಅದೃಷ್ಟವಶಾತ್ ಕೆಳಗಡೆ ದಡ ಸೇರಿರುವುದಾಗಿ ಹೇಳಿ ಸ್ಥಳೀಯರನ್ನು ಈಕೆ ನಂಬಿಸಿದ್ದಳು. ಇದೇ ಸುದ್ಧಿಯನ್ನು ಗ್ರಾಮಸ್ಥರು ಪೊಲೀಸರಿಗೆ ಹಾಗೂ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು.

ಕೆಲವರು ಮಾರುತಿ ಓಮ್ನಿ ಕಾರೊಂದು ಬಂದಿರುವ ಬಗ್ಗೆಯೂ ಊಹಾಪೋಹ ಹಬ್ಬಿಸಿದ್ದರು. ಕುಬ್ಜಾ ನದಿಯ ತೀರದಲ್ಲಿರುವ ಒಂಟಿ ಮನೆ ಇದಾಗಿದ್ದರಿಂದ ಸ್ಪಷ್ಟವಾದ ನಿಲುವಿಗೆ ಪೊಲೀಸರು ಬರಲು ಕಷ್ಟವಾಗಿತ್ತು. ಆದರೆ ರೇಖಾ ಹೇಳಿಕೆ, ಆಕೆಯ ಮುಖದಲ್ಲಿದ್ದ ಭಾವನೆಗಳು ಮಗುವನ ಅಪಹರಣ ನಡೆದಿಲ್ಲ ಎನ್ನುವುದನ್ನು, ಪೊಲೀಸರಿಗೆ ಆಕೆಯನ್ನೇ ಅನುಮಾನಿಸಲು ಅವಕಾಶ ಕಲ್ಪಿಸಿತ್ತು. ಅಲ್ಲದೇ ಪ್ರಕರಣ ನಡೆದ ತಕ್ಷಣ ಮೊಬೈಲ್ ವಿಡಿಯೋವೊಂದರಲ್ಲಿ ಇಬ್ಬರು ದುಷ್ಕರ್ಮಿಗಳು ಬಂದಿದ್ದರು ಎಂದು ನೀಡಿದ ಹೇಳಿಕೆ ಹಾಗೂ ಬಳಿಕ ಪೊಲೀಸರ ಬಳಿ ಒಬ್ಬ ದುಷ್ಕರ್ಮಿ ಎಂದು ನೀಡಿರುವ ಹೇಳಿಕೆಗಳಲ್ಲಿನ ವ್ಯತ್ಯಾಸಗಳು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದವು. ಆದರೂ ಪೊಲೀಸರಿಗೆ ಮನೆಯ ಪ್ರತ್ಯಕ್ಷದರ್ಶಿಯಾಗಿ, ತಾಯಿ ನೀಡಿದ ಹೇಳಿಕೆಯ ವಿರುದ್ಧ ತೀರ್ಮಾನಕ್ಕೆ ಬರುವುದು ಕಷ್ಟವಾಗಿತ್ತು. ಆದರೆ ತನಿಖೆಯುದ್ದಕ್ಕೂ ವಿಚಾರಣೆಯನ್ನು ಗೌಪ್ಯವಾಗಿಯೇ ಇಟ್ಟ ಪೊಲೀಸರು, ಮಾಧ್ಯಮಗಳಿಗೂ ಯಾವುದೇ ಮಾಹಿತಿ ನೀಡಿರಲಿಲ್ಲ. ಇದರಿಂದಾಗಿ ತನಿಖೆಯ ಹಾದಿಯೂ ಸುಗಮವಾಗಿತ್ತು.

ತಂಗಿ ಹತ್ಯೆಯ ಸತ್ಯ ನುಡಿದನೇ ಅಣ್ಣ?
ತಂಗಿ ಸಾನ್ವಿಕಾಳ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದು, ಆಕೆಯ ಅಣ್ಣ ಸಾತ್ವಿಕ್ ಎನ್ನಲಾಗಿದೆ. ಘಟನೆಯಲ್ಲಿ ಪ್ರತ್ಯಕ್ಷದರ್ಶಿಗಳಾಗಿದ್ದ ಪ್ರತಿಯೊಬ್ಬರನ್ನೂ ವಿಚಾರಣೆಗೊಳಪಡಿಸಿದ ಪೊಲೀಸರು, ಸಾನ್ವಿಕಾಳ ಅಣ್ಣ ಐದು ವರ್ಷ ಪ್ರಾಯದ ಸಾತ್ವಿಕ್‍ನನ್ನೂ ವಿಚಾರಿಸಿದ್ದರು. ಆದರೆ ಮೊದಲಿಗೆ ಭಯಗೊಂಡಿದ್ದ ಆತ ಮಾತನಾಡಿರಲಿಲ್ಲ. ಸಂಜೆ ಹೊತ್ತಿಗೆ ಪೊಲೀಸರೂ ಆತನೊಂದಿಗೆ ಸಲುಗೆ ಬೆಳೆಸಿದ್ದರು. ಜೊತೆಗೆ ದಿನಾಲೂ ಆಡವಾಡುತ್ತಿದ್ದ ತಂಗಿ ಸಾನ್ವಿಕಾ ಸಂಜೆಯಾದರೂ ಕಣ್ಣೆದುರಿಗೆ ಬಂದಿಲ್ಲ ಎಂದಾಗ ಪೊಲೀಸರ ಬಳಿ ತಂಗಿ ಬೇಕು ಎಂದಿದ್ದಾನೆ ಎನ್ನಲಾಗಿದೆ.

ಆಗ ಪೊಲೀಸರು ತಂಗಿ ಎಲ್ಲಿದ್ದಾಳೆ ಎಂದು ಕೇಳಿದಾಗ ಸಾನ್ವಿಕಾಳನ್ನು ಬೆಳಿಗ್ಗೆ ಕೊನೆಯದಾಗಿ ಯಾವ ರೀತಿಯಲ್ಲಿ ಕುಬ್ಜಾ ನದಿಯಲ್ಲಿ ಕಂಡೆ ಎನ್ನುವ ದೃಶ್ಯವನ್ನು ವಿವರಿಸಿದ್ದಾನೆ ಎನ್ನಲಾಗಿದೆ. ಗುರುವಾರ ಸಂಜೆ ಸಾತ್ವಿಕ್ ನೀಡಿದ್ದ ಹೇಳಿಕೆ ಮತ್ತು ಶುಕ್ರವಾರ ಸಾನ್ವಿಕಾ ದೇಹ ಪತ್ತೆಯಾಗಿದ್ದು ಎರಡನ್ನೂ ಗಮನಿಸಿದ ಪೊಲೀಸರು, ಸಾನ್ವಿಕಾ ಸ್ವತಃ ತನ್ನ ತಾಯಿಯಿಂದಲೇ ಹತ್ಯೆಯಾಗಿದ್ದಾಳೆ ಎಂದು ನಿರ್ಧಾರಕ್ಕೆ ಬಂದಿದ್ದಾರೆ ಪೊಲೀಸರು.

ಆತ್ಮಹತ್ಯೆಗೆ ಯತ್ನ?
ರೇಖಾ ಗಂಡ ಸಂತೋಷ್ ನಾಯ್ಕ್ ಹಾಗೂ ರೇಖಾ ನಡುವೆ ಕೌಟುಂಬಿಕ ಸಮಸ್ಯೆಗಳು ಇತ್ತು ಎನ್ನಲಾಗಿದೆ. ಸಂತೋಷ್ ನಾಯ್ಕ್ ತಾಯಿಯೂ ಮನೆಯಲ್ಲಿದ್ದು, ರಾತ್ರಿ ಸಂತೋಷ್ ಮನೆಯಲ್ಲಿ ಇರುತ್ತಿರಲಿಲ್ಲ. ಇದರಿಂದಾಗಿ ಮನೆಯಲ್ಲಿ ಆಗಾಗ ಕಿರಿಕಿರಿ ಇದ್ದ ಕಾರಣ, ರೇಖಾ ಜೀವನದಲ್ಲಿ ಬೇಸತ್ತಿದ್ದು, ಮಕ್ಕಳ ಜೊತೆಗೆ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಮೊದಲು ಚಿಕ್ಕ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದ ಬಳಿಕ ತನ್ನ ಮಗನನ್ನು ಹಾಗೂ ತಾನು ಸಾಯುವ ನಿರ್ಧಾರಕ್ಕೆ ಬಂದು ಹೊಳೆಗೆ ಹಾರಿದ್ದಾಳೆಯೇ? ಹೊಳೆಗೆ ಹಾರಿದ ಬಳಿಕ ಮಗ ಸಾತ್ವಿಕ್ ಬೊಬ್ಬೆ ಹೊಡೆದಿದ್ದು, ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆಯೆ? ಇದೆಲ್ಲವೂ ಪೊಲೀಸರ ತನಿಖೆಯಿಂದ ಸ್ಪಷ್ಟಗೊಂಡಿದ್ದು, ಮಾಹಿತಿಯಷ್ಟೇ ಬಹಿರಂಗವಾಗಬೇಕಿದೆ. ಆರೋಪಿ ರೇಖಾ ನಾಯ್ಕ್ ಈಗ ಪೊಲೀಸ್ ಕಸ್ಟಡಿಯಲ್ಲಿದ್ದು, ಸಂಜೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.














