ಅಕ್ರಮ ಗೋ ಸಾಗಾಟ ಎಂದು ಭಾವಿಸಿ ಹಣ್ಣು ವ್ಯಾಪಾರಿ ಟೆಂಪೂ ಮೇಲೆ ದಾಳಿ; ಎಸ್‍ಡಿಪಿಐ ತೀವ್ರ ಖಂಡನೆ – ಕಹಳೆ ನ್ಯೂಸ್

ಮಂಗಳೂರು : ಅಕ್ರಮ ಗೋ ಸಾಗಾಟ ನಡೆಸುತ್ತಿದ್ದಾರೆಂದು ಸಂಘಪರಿವಾರದ ಕಾರ್ಯಕರ್ತರು ಮಂಗಳೂರು ಸೆಂಟ್ರಲ್ ಮಾರುಕಟ್ಟೆಗೆ ಮಾವಿನ ಹಣ್ಣನ್ನು ಟೆಂಪೋದಲ್ಲಿ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಘಟನೆ ನಡೆದಿದೆ. ಉಳಾಯಿಬೆಟ್ಟುವಿನ ಇಬ್ಬರು ಮುಸ್ಲಿಂ ಯುವಕರಿಗೆ, ಕುಲಶೇಖರ ಸಮೀಪದಲ್ಲಿ ವಾಹನವನ್ನು ತಡೆದು ಮಾರಣಾಂತಿಕ ಹಲ್ಲೆ ನಡೆಸಿ, ಅವ್ಯಾಶ್ಯ ಶಬ್ಧಗಳಿಂದ ನಿಂದಿಸಿ, ದರೋಡೆ ನಡೆಸಿದ್ದಾರೆ. ಈ ಘಟನೆಯನ್ನು ಎಸ್‍ಡಿಪಿಐ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಕಳೆದ ಹಲವಾರು ದಿನಗಳಿಂದ ಪದೇ ಪದೇ ಅಕ್ರಮ ಗೋ ಸಾಗಾಟವನ್ನು ಮುಂದಿಟ್ಟುಕೊಂಡು ಜಿಲ್ಲೆಯಲ್ಲಿ ಶಾಂತಿ ಕದಡಲು ಸಂಘಪರಿವಾರ ಪ್ರಯತ್ನಿಸುತ್ತಿದೆ, ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ವಾಹನದಲ್ಲಿ ಗೋವುಗಳಲ್ಲ, ಮಾವಿನ ಹಣ್ಣು ಇರುವುದು ಎಂದು ಹಲವು ಬಾರಿ ಹೇಳಿದರೂ, ಸಂಘಪರಿವಾರದ ಗೂಂಡಾಗಳು, ಅವರ ಮಾತನ್ನು ಆಲಿಸದೆ ಜಿಲ್ಲೆಯಲ್ಲಿ ಗಲಭೆ ಸೃಷ್ಠಿಸುವ ಏಕೈಕ ಉದ್ದೇಶದಿಂದ ಈ ರೀತಿಯ ಕೃತ್ಯ ನಡೆಸುತ್ತಾ ಬಂದಿದ್ದಾರೆ. ಆದರೆ ಇದನ್ನು ತಡೆಯಲು ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಎಸ್‍ಡಿಪಿಐ ದೂರಿದೆ.

ಮುಂದಿನ ತಿಂಗಳು ಮುಸಲ್ಮಾನರ ಪವಿತ್ರ ಬಕ್ರೀದ್ ಹಬ್ಬ ಬರುತ್ತಿದ್ದು ಈ ಪ್ರಯುಕ್ತ ಪ್ರಾಣಿ ಬಲಿದಾನ ನಡೆಯಲಿರುವುದರಿಂದ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಎಸ್‍ಡಿಪಿಐ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಹಮೀದ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.













