
ಲಾಹೋರ್: ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ, ಮುಂಬಯಿ ದಾಳಿಯ ಸಂಚುಕೋರ, ಜಮಾತ್-ಉದ್- ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಖದ್ದಾಫಿ ಸ್ಟೇಡಿಯಂನಲ್ಲಿ ಈದ್ ಹಬ್ಬದ ವಿಶೇಷ ನಮಾಜ್‌ನ ನೇತೃತ್ವ ವಹಿಸಲು ಪಾಕಿಸ್ಥಾನ ಸರಕಾರ ಅವಕಾಶ ನಿರಾಕರಿಸಿದೆ.
ಹೀಗಾಗಿ, ಉಗ್ರ ಸಯೀದ್ ತನ್ನ ನಿವಾಸದ ಸಮೀಪವಿರುವ ಸ್ಥಳೀಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾನೆ. ಖದ್ದಾಫಿ ಸ್ಟೇಡಿಯಂನಲ್ಲೇ ನಮಾಜ್‌ನ ನೇತೃತ್ವ ವಹಿಸಬೇಕು ಎಂಬುದು ಆತನ ಬಯಕೆಯಾಗಿತ್ತು. ಆದರೆ, ಸರಕಾರವು ಅದಕ್ಕೆ ಅವಕಾಶ ಕೊಡಲಿಲ್ಲ ಮಾತ್ರವಲ್ಲ, ಸೂಚನೆಯ ಹೊರತಾಗಿಯೂ ತೆರಳಿದರೆ, ಬಂಧಿಸುವ ಎಚ್ಚರಿಕೆಯನ್ನೂ ನೀಡಿತ್ತು. ಹಲವು ವರ್ಷಗಳಿಂದಲೂ ಸಯೀದ್ ಇಲ್ಲೇ ನಮಾಜ್‌ನ ನೇತೃತ್ವ ವಹಿಸುತ್ತಿದ್ದು, ಆತನಿಗೆ ಸರಕಾರ ಹೆಚ್ಚುವರಿ ಭದ್ರತೆಯನ್ನೂ ಒದಗಿಸುತ್ತಾ ಬಂದಿತ್ತು.















