
ಸಾಂವಿಧಾನಿಕ ಸಭ್ಯತೆಗೆ ಬೆಲೆಕೊಟ್ಟು ಮೋದಿ ಅವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಮಂಗಳವಾರವಷ್ಟೇ ಹೇಳಿಕೆ ನೀಡಿದ್ದ ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಬುಧವಾರ ಉಲ್ಟಾ ಹೊಡೆದಿದ್ದಾರೆ. ಬುಧವಾರ ಟ್ವೀಟ್ ಮಾಡಿದ ದೀದಿ, ‘ಹೊಸ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯವರಿಗೆ ಅಭಿನಂದನೆಗಳು. ನಿಮ್ಮ ಆಹ್ವಾನ ಪರಿಗಣಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ನಾನು ನಿರ್ಧರಿಸಿದ್ದೆ.
ಆದರೆ, ಕಳೆದ ಒಂದು ಗಂಟೆಯಲ್ಲಿ ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ನೋಡಿ ಆಘಾತವಾಯಿತು. ಬಿಜೆಪಿ ನಾಯಕರು ಪ.ಬಂಗಾಲದಲ್ಲಿ 56 ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈಯ್ಯಲಾಗಿದೆ ಎಂದು ಹೇಳುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು ಸುದ್ದಿ. ಬಂಗಾಲದಲ್ಲಿ ರಾಜಕೀಯ ಹತ್ಯೆ ನಡೆದಿಲ್ಲ. ವೈಯಕ್ತಿಕ ದ್ವೇಷ, ಕೌಟುಂಬಿಕ ಕಲಹಗಳಿಂದ ಈ ಹತ್ಯೆಗಳು ಆಗಿರಬಹುದು. ಈ ರೀತಿಯ ಸುಳ್ಳು ಸುದ್ದಿಗಳು ಬಿಜೆಪಿ ಹಬ್ಬಿಸುತ್ತಿರುವ ಹಿನ್ನೆಲೆಯಲ್ಲಿ ನಾನು ನಿರ್ಧಾರ ಬದಲಿಸಿದ್ದೇನೆ. ನಿಮ್ಮ ಪದಗ್ರಹಣ ಸಮಾರಂಭದಲ್ಲಿ ನಾನು ಭಾಗಿಯಾಗುವುದಿಲ್ಲ. ನನ್ನನ್ನು ಕ್ಷಮಿಸಿ’ ಎಂದು ಬರೆದುಕೊಂಡಿದ್ದಾರೆ.














