
ಬೆಂಗಳೂರು: ನಿನ್ನೆ ಬೆಂಗಳೂರಿನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ನಿನ್ನೆ ನಗರದಲ್ಲಿ ಅತೀ ಹೆಚ್ಚು ಪ್ರಮಾಣದ ಮಳೆಯಾಗಿದೆ ಅಂತಾ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದಾರೆ. ಇಡೀ ನಗರದಲ್ಲಿ ಆರ್. ಆರ್.ನಗರದಲ್ಲಿ ಅತೀ ಹೆಚ್ಚು ಮಳೆಯ ಪ್ರಮಾಣ 112.5. ಮಿ.ಮೀ ಮಳೆ ದಾಖಲಾಗಿದೆ.
ಸಂಪಂಗಿ ರಾಮನಗರದಲ್ಲಿ 50.5 ಮಿ.ಮೀ., ಕುಶಾಲನಗರದಲ್ಲಿ 48.5 ಮಿ.ಮೀ., ದಾಸರಹಳ್ಳಿಯಲ್ಲಿ 37.5 ಮಿ.ಮೀ., ರಾಧಾಕೃಷ್ಣ ವಾರ್ಡ್ ನಲ್ಲಿ 35.5 ಮಿ.ಮೀ. ಮಳೆಯಾಗಿದೆ.
ವರುಣನ ಅಬ್ಬರಕ್ಕೆ ಬೆದರಿ ನಗರದೆಲ್ಲೆಡೆ ಬೃಹತ್ ಮರಗಳು ಧರೆಗುರುಳಿವೆ. ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು ಜನ ಪರದಾಡ್ತಿದ್ದಾರೆ. ಮಲ್ಲೇಶ್ವರಂ ನ 3ನೇ ಕ್ರಾಸ್ ನಲ್ಲಿ ಮರ ಬಿದ್ದು ಮೂರು ದ್ವಿಚಕ್ರ ವಾಹನ ಜಖಂಗೊಂಡಿವೆ. ವಿದ್ಯುತ್ ಕಂಬಗಳು ಹಾಗೂ ತಂತಿಗಳು ಹರಿದ ಕಾರಣ ಪವರ್ ಕಟ್ ಆಗಿತ್ತು. ಆದ್ರೆ ರಾತ್ರಿ ಕಳೆದು ಬೆಳಗಾದ್ರೂ ಇನ್ನೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕಾಗಿಮಿಸದೆ ಇದ್ದಿದ್ರಿಂದ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಇಂದು ಸಂಜೆ ಕೂಡ ನಗರದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಇನ್ನೂ 2 ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗಲಿದೆ, ಹೀಗಾಗಿ ಜನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.














