
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಯೋಧರೊಬ್ಬರು ಹಾಕಿದ್ದ ವೋಟ್ ಅಸಿಂಧುಗೊಳಿಸುವಂತೆ ಚುನಾವಣಾ ಆಯೋಗ ಆದೇಶಿಸಿದೆ.

ಚುನಾವಣೆ ಸಂದರ್ಭದಲ್ಲಿ ಸಿಆರ್‍ಪಿಎಫ್ ಯೋಧ ಆರ್.ಸಿ ನಾಯಕ್, ಸುಮಲತಾಗೆ ವೋಟ್ ಹಾಕಿ, ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಬ್ಯಾಲೆಟ್ ಪೇಪರ್‌ನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇವರ ಈ ಫೋಟೋ ವೈರಲ್ ಆಗುತ್ತಿದ್ದಂತೆ, ಯೋಧನ ಪೋಸ್ಟ್ ಗೆ ಖುದ್ದು ಧನ್ಯವಾದ ಅರ್ಪಿಸಿದ್ದ ಸುಮಲತಾ, ನಿಮಗೆ ತುಂಬಾ ಚಿರಋಣಿ ಎಂದು ಹೇಳಿದ್ದರು.
ಆದ್ರೆ ಚುನಾವಣಾ ಆಯೋಗದ ಪ್ರಕಾರ ಯಾರಿಗೆ ವೋಟ್ ಹಾಕಿದ್ದೇನೆಂದು ಬಹಿರಂಗಪಡಿಸುವುದು ಸೀಕ್ರೆಸಿ ಆಫ್ ವೋಟ್ ಅಡಿಯಲ್ಲಿ ಅಪರಾಧ. ಈ ಹಿನ್ನೆಲೆ ಬಹಿರಂಗವಾಗಿ ಯಾರಿಗೆ ವೋಟ್ ಹಾಕಿದ್ದೇನೆಂದು ಹೇಳಿಕೆ ನೀಡಿದ ಯೋಧನ ವಿರುದ್ಧ ಅಡ್ವೊಕೇಟ್ ಕಿರಣ್ ಹಾಗೂ ಇನ್ನಿತರ ಕೆಲವು ವಕೀಲರಿಂದ ನ್ಯಾಯಾಲಯಕ್ಕೆ ಪಿಟಿಷನ್ ಸಲ್ಲಿಕೆಯಾಗಿತ್ತು. ಪ್ರಕರಣ ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ಇದು ಆಯೋಗದ ನಿರ್ಧಾರ ಎಂದು ಕೈಬಿಟ್ಟಿತ್ತು.
ಸದ್ಯ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರೋ ಚುನಾವಣಾ ಆಯೋಗ, ಯೋಧ ಆರ್.ಸಿ ನಾಯಕ್ ಅವರ ಮತವನ್ನ ಅಸಿಂಧುಗೊಳಿಸುವಂತೆ ಆದೇಶ ನೀಡಿದೆ. ಆ ಒಂದು ಮತವನ್ನ ಕೌಂಟಿಂಗ್‍ಗೆ ತೆಗೆದುಕೊಳ್ಳದಂತೆ ಸೂಚಿಸಲಾಗಿದೆ. ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾ ಆಯೋಗದಿಂದ ಮಂಡ್ಯ ಡಿಸಿಗೆ ನೋಟಿಸ್ ಜಾರಿಯಾಗಿದೆ.














