
ಕಲಬುರ್ಗಿ: ವಿಧಾನಸಭಾ ಚುಣಾವಣೆ ಹಾಗೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಬಾಬುರಾವ್ ಚವ್ಹಾಣ್ ಇಂದಿನಿಂದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಬಾಬುರಾವ್ ಚವ್ಹಾಣ್ ಕಲಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಬಿಜೆಪಿಯಿಂದ ಡಾ.ಉಮೇಶ್ ಜಾಧವ್‍ಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಇತ್ತ ಕಾಂಗ್ರೆಸ್ ಸೇರಿದ ಬಳಿಕ ಚಿಂಚೋಳಿ ಉಪಸಮರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕೊನೆಗಳಿಗೆಯಲ್ಲಿ ಸುಭಾಷ್ ರಾಠೋಡ್‍ಗೆ ‘ಕೈ’ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದರು. ಅಲ್ಲದೇ ಸುಭಾಷ್ ರಾಠೋಡ್ ನಾಮಪತ್ರ ಸಲ್ಲಿಕೆ ವೇಳೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಬೇಸರಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಸುಭಾಷ್ ರಾಠೋಡ್ ಕರೆದರೂ ಪ್ರಚಾರಕ್ಕೆ ಹೋಗಿರಲಿಲ್ಲ. ಕೊನೆಗೆ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಬಾಬುರಾವ್ ಚವ್ಹಾಣ್‍ರ ಮನವೊಲಿಕೆ ಮಾಡಿದ್ದು, ಅವರ ಅತೃಪ್ತಿ ಶಮನವಾಗಿದೆ ಎನ್ನಲಾಗಿದೆ. ಹೀಗಾಗಿ ಚವ್ಹಾಣ್ ಇಂದಿನಿಂದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.














