
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಜಪ್ಪಿನಮೊಗರು ಬಳಿ ರಾತ್ರಿ ಪೊಲೀಸರು ರೌಡಿ ಶೀಟರ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. 3 ಹತ್ಯೆ, ಹತ್ಯೆ ಯತ್ನ, ಬೆದರಿಕೆ ಕೇಸ್ ಆರೋಪಿಯಾದ ಗೌರೀಶ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆತನನ್ನು ಗಡಿಪಾರು ಮಾಡಲಾಗಿತ್ತು.
ಗಡಿಪಾರು ಮಾಡಿದ್ದರೂ, ಮಂಗಳೂರಿನಲ್ಲಿ ಗೌರೀಶ್ ಓಡಾಡಿಕೊಂಡಿದ್ದ. ಈ ಮಾಹಿತಿ ತಿಳಿದ ಪೊಲೀಸರು ಬಂಧನಕ್ಕೆ ತೆರಳಿದ್ದ ವೇಳೆಯಲ್ಲಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಚೇಸ್ ಮಾಡಿ ಹಿಡಿಯುವ ವೇಳೆ ಪೊಲೀಸ್ ಸಿಬ್ಬಂದಿ ಶಿನಪ್ಪರ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಫೈರಿಂಗ್ ಮಾಡಿದ್ದು, ಗೌರೀಶ್ ಕಾಲಿಗೆ ಗುಂಡೇಟು ಬಿದ್ದಿದೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೌರೀಶ್ ಕಾರಿನಲ್ಲಿ ಮಾರಕಾಸ್ತ್ರ ಪತ್ತೆಯಾಗಿವೆ. ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














